ಗೌರಿಬಿದನೂರು: ಪಟ್ಟಣದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಿದ್ದ ಹೆಂಚಿನ ಚಾವಣಿಯಿಯ ರೈಲ್ವೆ ನಿಲ್ದಾಣ ಇದೀಗ ಜಿಲ್ಲೆಯಲ್ಲೇ ಹೈಟಕ್ ರೂಪದಲ್ಲಿ ನಿರ್ಮಾಣಗೊಳ್ಳಲಿದೆ.
ಸುಮಾರು 1.25 ಕೋಟಿಗೂ ಹೆಚ್ಚು ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನಿಲ್ದಾಣದ ಶೇ.75 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿ ಪ್ರಗತಿಯಲ್ಲಿದೆ. ರೈಲ್ವೆ ನಿಲ್ದಾಣ ಶಿಥಿಲಾವಸ್ಥೆಗೆ ತಲುಪಿದ್ದು, ಪ್ರಸ್ತುತ ನಿರ್ಮಿಸುತ್ತಿರುವ ನಿಲ್ದಾಣ ಹಳೆ ಕಟ್ಟಡದಿಂದ ಒಂದು ಫರ್ಲಾಂಗು ದೂರದಲ್ಲಿ ನಿರ್ಮಾಣಗೊಳ್ಳುತ್ತಿದೆ. ಎತ್ತರವಾದ ಪ್ಲಾಟ್ ಫಾರಂ, ಉತ್ತಮ ಮೇಲ್ಸೇತುವೆ, ವಿದ್ಯುತ್ ದೀಪ, ಸುತ್ತಲೂ ಕಾಂಪೌಂಡ್, ರೈಲು ನಿಲ್ದಾಣ ಸಂಪರ್ಕಿಸಲು ಪಟ್ಟಣದಿಂದ ಸಿಮೆಂಟ್ ರಸ್ತೆ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಪೂರೈಸಲಾಗುತ್ತಿದೆ. ಟಿಕೆಟ್ ವಿತರಿಸಲು ಮತ್ತು ಸೀಟು ಕಾಯ್ದಿರಿಸಲು ಕಂಪ್ಯೂಟರೀಕೃತ ಕೌಂಟರ್ ಅಳವಡಿಸಲಗಿದೆ.
ಕೆಲವೇ ರೈಲುಗಳ ನಿಲುಗಡೆ: ಈ ನಿಲ್ದಾಣದ ಮೂಲಕ ಹಾದು ಹೋಗುವ ರೈಲುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದರೆ ನಿಲುಗಡೆ ಇರುವ ರೈಲುಗಳ ಸಂಖ್ಯೆ ತೀರಾ ಕಡಿಮೆ.
ಈ ಮಾರ್ಗದಲ್ಲಿ ಎಲೆಕ್ಟ್ರಿಕ್ ರೈಲುಗಳು ಸಂಚರಿಸುವ ಕಾಮಗಾರಿ ಪೂರ್ಣಗೊಳ್ಳಲು 7 ರಿಂದ 8 ತಿಂಗಳ ಅಗತ್ಯವಿದೆ ಎಂದು ರೈಲ್ವೇ ಇಲಾಖೆ ಅಂದಾಜು ಮಾಡಿದೆ. ಕಾಮಗಾರಿ ಪೂರ್ಣಗೊಂಡಲ್ಲಿ ಎಲೆಕ್ಟ್ರಿಕ್ ರೈಲು ಸಂಚರಿಸಲಿದೆ. ಇಷ್ಟೆಲ್ಲಾ ರೈಲುಗಳು ಸಂಚರಿಸುತ್ತಿದ್ದರೂ ಈ ಜಿಲ್ಲೆಯ ಜನತೆಗೆ ಇದರ ಅನುಕೂಲ ಮಾತ್ರ ಶೂನ್ಯ.
Advertisement