ಕೋಲಾರ/ಶ್ರೀನಿವಾಸಪುರ: ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಗುತ್ತಿಗೆದಾರರು ಯಾರೇ ಆಗಿರಲಿ ತಪ್ಪು ಕಂಡು ಬಂದರೆ ಮುಲಾಜು ಇಲ್ಲದೆ ಕ್ರಮ ಕೈಗೊಳ್ಳುವೆ ಎಂದು ಶಾಸಕ ಕೆ.ಆರ್. ರಮೇಶ್ಕುಮಾರ್ ಎಚ್ಚರಿಕೆ ನೀಡಿದರು.
ಅವರು ಬುಧವಾರ ಶ್ರೀನಿವಾಸಪುರ ತಾಲೂಕಿನ ಆರಿಕುಂಟೆ ಗ್ರಾಮ ಪಂಚಾಯತಿಗೆ ಸೇರಿದ ಗ್ರಾಮಗಳಲ್ಲಿನ ಕುಂದು ಕೊರತೆಗಳನ್ನು ಆಲಿಸಲು ಕೈಗೊಂಡಿದ್ದ ಪ್ರವಾಸದ ಸಂದರ್ಭದಲ್ಲಿ ರೋಣೂರು-ಲಕ್ಷ್ಮೀಪುರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸುಮಾರು 1.75 ಕೋಟಿ ರು. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದ್ದು ಅಧಿಕಾರಿಗಳು ರಸ್ತೆ ಕಾಮಗಾರಿಯ ಬಗ್ಗೆ ವಿಶೇಷ ನಿಗಾವಹಿಸಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಈ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲವೆಂದು ಹೇಳಿದರು.
ನಂತರ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕರು ಕುಡಿಯುವ ನೀರಿನ ಸಮಸ್ಯೆ ಕುರಿತು ಜನತೆ ನೀಡಿದ ಅಹವಾಲು ಸ್ವೀಕರಿಸಿ, ಕೂಡಲೇ ನೀರಿನ ಸಮಸ್ಯೆ ನಿವಾರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಸದಸ್ಯ ಕೆ.ಕೆ ಮಂಜುನಾಥೆ ರೆಡ್ಡಿ, ಮಾಜಿ ಸದಸ್ಯರಾದ ದಿಂಬಾಲ ಅಶೋಕ್, ಎಲ್.ವಿ. ಗೋವಿಂದಪ್ಪ, ಗ್ರಾಪಂ ಸದಸ್ಯ ಚೌಡರೆಡ್ಡಿ, ಎ.ಇ.ಇ ಮೋಹನ್ಕುಮಾರ್, ಎಲ್.ಎಂ. ನಾಗರಾಜ್ ಇದ್ದರು.
Advertisement