ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ

Updated on

ಶಿಡ್ಲಘಟ್ಟ: ಜನಪ್ರತಿನಿಧಿಗಳು ಗುತ್ತಿಗೆದಾರರು ಮಾಡುವ ಕಾಮಗಾರಿಗಳನ್ನು ಪರಿಶೀಲಿಸಿ ಗುಣಮಟ್ಟದ ಬಗ್ಗೆ ಆಸಕ್ತಿ ವಹಿಸಬೇಕು ಎಂದು ಶಾಸಕ ಎಂ. ರಾಜಣ್ಣ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನೂತನ ತಾಪಂ ಅಧ್ಯಕ್ಷೆ ಆಂಜಿನಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಎಲ್ಲ ಸದಸ್ಯರು ಅಧಿಕಾರಿಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ತಾಪಂಗೆ ಸರ್ಕಾರದಿಂದ ಬಿಡುಗಡೆಯಾಗಿರುವ 13 ನೇ ಹಣಕಾಸು ಯೋಜನೆ ಸೇರಿದಂತೆ ನಾನಾ ಯೋಜನೆಗಳ ಕ್ರಿಯಾಯೋಜನೆ ತಯಾರಿಸಲು ಸದಸ್ಯರು ಉಪಯೋಗ ಮಾಡಿಕೊಳ್ಳಬೇಕು ಎಂದು ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.
ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ನಿಗಧಿಪಡಿಸಲಾದ ಒಟ್ಟು 11.95 ಲಕ್ಷ ಅನುದಾನದ ಪೈಕಿ  ಇಲಾಖೆಯಿಂದ 7.97 ಲಕ್ಷ ಬಿಡುಗಡೆಯಾಗಿದ್ದು, ಉಳಿದ 3.98 ಲಕ್ಷ ನರೇಗಾ ಯೋಜನೆಯಿಂದ ತೊಡಗಿಸಬೇಕು ಎಂದು ಇಲಾಖಾಧಿಕಾರಿ ತಿಳಿಸಿದರು. ಕಳೆದ ಮೂರು ವರ್ಷಗಳಿಂದ ಅಂಗವಿಕಲರಿಗೆ ಮೀಸಲಾಗಿರುವ ಶೇ.3 ರ ಅನುದಾನ ಹಂಚಿಕೆಯಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಅವರಿಗೆ ಮೀಸಲಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವಂತೆ ಒತ್ತಾಯಿಸಿದರು.
ಅಂಗವಿಕಲರಿಗಾಗಿ 50 ಟ್ರೈಸಿಕಲ್ಗಳನ್ನು ಖರೀದಿ ಮಾಡಲು ಯೋಜನೆ ರೂಪಿಸಲಾಗಿದ್ದು, 165 ಮಂದಿ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಲಾಗಿದೆ. ಬುಧವಾರ ಟೆಂಡರ್ ಕರೆದು, ಮುಂದಿನ ಸೆಪ್ಟೆಂಬರ್ 10 ರಂದು ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿ ತಿಳಿಸಿದರು.
ತಾಲೂಕಿನ ಕೊತ್ತನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ 75 ಮಂದಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಇಬ್ಬರು ಮಾತ್ರ ಎಂದು ಸದಸ್ಯೆ ನೇತ್ರಾ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಹಾಜರಿದ್ದ ಶಿಕ್ಷಣ ಇಲಾಖೆ ವ್ಯವಸ್ಥಾಪಕ ಮುನಿಯಪ್ಪ, ಶಿಕ್ಷಣಾಧಿಕಾರಿ ವರ್ಗಾವಣೆಯಾಗಿದ್ದಾರೆ ಬೇರೆ ಅಧಿಕಾರಿ ಬಂದ ಕೂಡಲೆ ಶಿಕ್ಷಕರನ್ನು ನೇಮಕ ಮಾಡಲು ಕ್ರಮಕೈಗೊಳ್ಳಲಾಗುತ್ತದೆ ಎಂದರು.
ತಾಪಂ ಉಪಾಧ್ಯಕ್ಷ ಡಿ.ಎಸ್.ಎನ್. ರಾಜು, ಇಒ ಆರ್. ಉಮೇಶ್, ಜಿಪಂ ಎಂಜಿನಿಯರಿಂಗ್ ವಿಭಾಗದ ಗಣಪತಿ ಸಾಕರೆ, ಸದಸ್ಯರಾದ ಗಂಜಿಗುಂಟೆ ನರಸಿಂಹಮೂರ್ತಿ, ವೇಣುಗೋಪಾಲ್, ಚನ್ನಕೃಷ್ಣ, ಶ್ರೀನಾಥ್, ನಾರಾಯಣಸ್ವಾಮಿ, ವೆಂಕಟೇಶ್, ಯರಬಚ್ಚಪ್ಪ, ಸರಸ್ವತಮ್ಮ, ರಾಧಿಕಾ, ಮಂಜುಳಮ್ಮ, ನೇತ್ರಾ, ಗೌರಮ್ಮ, ಶಶಿಕಲಾ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com