ಮುಳಬಾಗಲು: ಪಟ್ಟಣದ ವಾರ್ಡ್ 4ರ ಮುತ್ಯಾಲಪೇಟೆಯಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಬುಧವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಐದು ದಿನಗಳಿಂದ ಟ್ಯಾಂಕರ್ ನೀರು ಪೂರೈಕೆ ನಿಲ್ಲಿಸಲಾಗಿದೆ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು. ಇಂದಿನಿಂದಲೇ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು. 2-3 ದಿನಗಳಲ್ಲಿ ಪೈಪ್ಲೈನ್ ಕಾಮಗಾರಿ ಮುಗಿಸಿ ಶಾಶ್ವತ ನೀರಾವರಿ ವ್ಯವಸ್ಥೆ ಮಾಡಲಾಗುವುದೆಂದು ಪುರಸಭೆ ಮುಖ್ಯಾಧಿಕಾರಿ ಅಶೋಕ್ ಕುಮಾರ್ ಭರವಸೆ ನೀಡಿದರು. ಕೆಇಬಿ ಶ್ರೀನಿವಾಸ್, ಕೃಷ್ಣಪ್ಪ, ಬೈಯ್ಯಣ್ಣ, ಸೈಯಾದ್ ಮಸ್ತಾಫಾ, ನೂರ್ ಜಹನ್, ಹಸೀನಾ, ಪರ್ವಿನ್, ಬೇಬಿ ಮುಂತಾದವರು ಇದ್ದರು.
ಆದರ್ಶ ಶಾಲಾ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮುಳಬಾಗಲು: ಶಿವಕೇಶವನಗರದ ಆದರ್ಶ ವಿದ್ಯಾಲಯದ 7,8,9 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿಗೆ ಮುಖ್ಯೋಪಾಧ್ಯಯ ವಿ. ಕೃಷ್ಣಪ್ಪ 9740200181ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ತಾಯಲೂರು ಹೋಬಳಿ ಕ್ರೀಡಾಕೂಟ
ಮುಳಬಾಗಲು: ವಿದ್ಯಾರ್ಥಿಗಳು ಸೋಲು ಗೆಲವುಗಳನ್ನ ಸಮಾನವಾಗಿ ಸ್ವೀಕರಿಸಬೇಕು ಎಂದು ತಾಯಲೂರು ಗ್ರಾಪಂ ಅಧ್ಯಕ್ಷೆ ಉಷಾ ನಾಗರಾಜ್ ನುಡಿದರು. ತಾಯಲೂರಿನ ಹಿರಿಯ ಪ್ರಾಥಮಿಕ ಮತ್ತು ಫ್ರೌಢಶಾಲೆಗಳ ತಾಯಲೂರು ಹೋಬಳಿ ಮಟ್ಟದ ಕ್ರೀಡಾಕೂಟ ಉದ್ಫಾಟಿಸಿ ಮಾತನಾಡಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗುಲ್ಜಾರ್ ಮಾತನಾಡಿ, ಚಿಕ್ಕವಯಸ್ಸಿನಲ್ಲಿ ಸತತವಾದ ಅಭ್ಯಾಸ ಮಾಡುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಸಿಗುವುದೆಂದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಇ. ಶ್ರೀನಿವಾಸಗೌಡ ಮಾತನಾಡಿ, ಇಲಾಖೆ ನಿಯಮಗಳಂತೆ ಕ್ರೀಡಾಪಟುಗಳಿಗೆ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು. ಅಂತಾರರಾಷ್ಟ್ರೀಯ ಕ್ರೀಡಾಪಟು ರಾಮಮೂರ್ತಿ ನಾಯ್ಡು ಮಾತನಾಡಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಧರ್, ಉಪಾಧ್ಯಕ್ಷ ರೆಡ್ಡಪ್ಪ, ಶಿಕ್ಷಕ ಗೋಪಿನಾಥ್, ಶಿಕ್ಷಕ ಪ್ರತಿನಿಧಿ ಗೋವಿಂದಪ್ಪ ಮುಂತಾದವರು ಭಾಗವಹಿಸಿದ್ದರು.
ಸಾಲಗಾರರ ಕಾಟ: ವ್ಯಕ್ತಿ ನೇಣಿಗೆ ಶರಣು
ಚಿಂತಾಮಣಿ: ಸಾಲಗಾರರ ಕಾಟ ತಾಳಲಾರದೆ ವ್ಯಕ್ತಿಯೊಬ್ಬರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಚಾರ್ಲಹಳ್ಳಿ ಠಾಣೆ ವ್ಯಾಪ್ತಿಯ ಮುರುಗಮಲ್ಲ ಗ್ರಾಮದಲ್ಲಿ ಬುಧವಾರ ನಡೆದಿದೆ. ಬೆಂಗಳೂರಿನ ಗೌರಿಪಾಳ್ಯದ ಪಕೃದ್ದೀನ್(28) ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡಿದ್ದ ಯುವತಿ ಸಾವು
ಚಿಂತಾಮಣಿ: ಗ್ರಾಮಾಂತರ ಠಾಣೆ ವ್ಯಾಪ್ತಿಯ ಊಲವಾಡಿ ಗ್ರಾಮದ ದಿವ್ಯಾ(20) ಎಂಬ ಯುವತಿ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಸ್ಟೌವ್ ಸಿಡಿದು ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದು ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪೊಲೀಸರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.
Advertisement