ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆ ನೀಡುವುದಾಗಿ ಹಾಗೂ ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಉತ್ತಮ ಆಡಳಿತ ನೀಡುವುದಾಗಿ ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷೆ ರತ್ನಮ್ಮ ನಂಜೇಗೌಡ ತಿಳಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿ.ಪಂ. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಆ.15 ರಿಂದ ಹಮ್ಮಿಕೊಂಡಿರುವ ಕೆರೆಗಳನ್ನು ಉಳಿಸಿ ಅಂದೋಲನಕ್ಕೆ ಜಿ.ಪಂ. ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ ಅವರು, ಕೆರೆಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವೆಂದರು.
ಉಪಾಧ್ಯಕ್ಷೆ ಸೀಮೋಲ್ ಮೋಹನ್ ಮಾತನಾಡಿ, ಮಹಿಳೆಯರ ಮೇಲೆ ಇತ್ತೀಚೆಗೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯಗಳ ಪ್ರಕರಣಗಳ ತಡೆಗೆ ಹೆಚ್ಚಿನ ಕ್ರಮ ಕೈಗೊಳ್ಳುವುದರ ಜತೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಧ್ಯಕ್ಷರ ಜೊತೆ ಕೈಜೋಡಿಸಿ ಕೆಲಸ ಮಾಡುವುದಾಗಿ ತಿಳಿಸಿದರು.
ವರಿಷ್ಠರು ನಮ್ಮ ಮೇಲೆ ನಂಬಿಕೆಯಿಟ್ಟು ಆಯ್ಕೆ ಮಾಡಲು ಸಹಕಾರ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತವನ್ನು ನೀಡಲು ಶ್ರಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಕರ್ತರಿಗೆ ಪ್ರವೇಶ ನಿರಾಕರಣೆ: ಜಿಪಂ ಚುನಾವಣೆಯ ಸಂದರ್ಭದಲ್ಲಿ ಮಾಧ್ಯಮಗಳಿಗೆ ಕೆಲವು ಸಲಹೆ ಸೂಚನೆ ನೀಡಿ ವರದಿ ಮಾಡಲು ಅವಕಾಶ ಮಾಡಿಕೊಡುತ್ತಿದ್ದ ಜಿಪಂ ಅಧಿಕಾರಿಗಳು ಈ ಬಾರಿ ಪತ್ರಕರ್ತರನ್ನು ಸಭಾಂಗಣದೊಳಕ್ಕೆ ಪ್ರವೇಶಿಸಲು ಅನುಮತಿ ನಿರಾಕರಿಸಿ ಟೀಕೆಗೆ ಗುರಿಯಾದರು.
ಸಭಾ ನಿಯಮಗಳಿಗೆ ಯಾವುದೇ ಚ್ಯುತಿ ನಮ್ಮಿಂದ ಆಗಲ್ಲ, ಪ್ರತಿವರ್ಷದಂತೆ ತಮ್ಮ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರೂ ಅಧಿಕಾರಿಗಳು ಅವಕಾಶ ನೀಡಿದೆ ಉದ್ದಟತನ ಪ್ರದರ್ಶಿಸಿದರು. ಅಧಿಕಾರಿಗಳ ವರ್ತನೆಗೆ ಜಿಪಂ ಸದಸ್ಯರು ಹಲವರು ಅಸಮಾಧಾನ ವ್ಯಕ್ತಪಡಿಸಿ ವಿಷಾದಿಸಿದರು.
Advertisement