ಕೋಲಾರ: ಕೋಲಾರ ಜಿಪಂ ಮತ್ತೆ ಜೆಡಿಎಸ್ ಪಾಲಾಗಿದೆ. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಾಲೂರು ತಾಲೂಕಿನ ಕೊಮ್ಮನಹಳ್ಳಿಯ ರತ್ನಮ್ಮ ಕೆ.ವೈ. ನಂಜೇಗೌಡ ಅವಿರೋಧ ಆಯ್ಕೆಯಾಗಿದ್ದಾರೆ.
ಜೆಡಿಎಸ್ಗೆ ಹಿಂದಿನಿಂದಲೂ ಬೆಂಬಲ ನೀಡುತ್ತಾ ಬಂದಿರುವ ಬಂಗಾರಪೇಟೆ ತಾಲೂಕಿನ ಕಾಮಸಂದ್ರ ಜಿಪಂ ಕ್ಷೇತ್ರದ ಬಿಜೆಪಿ ಸದಸ್ಯೆ ಸೀಮೋಲ್ ಮೋಹನ್ ಮೂರ್ತಿ ಉಪಾಧ್ಯಕ್ಷರಾಗಿದ್ದಾರೆ.
ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿ ಬುಧವಾರ ಜಿಪಂ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಪ್ರಾದೇಶಿಕ ಆಯುಕ್ತ ಗೌರವ್ ಗುಪ್ತ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಇಒ ವಿನೋತ್ ಪ್ರಿಯಾ ಚುನಾವಣೆ ಕಾರ್ಯಕ್ಕೆ ಸಹಕಾರ ನೀಡಿದರು.
ಕೋಲಾರ ಜಿಪಂ ಒಟ್ಟು 28 ಸದಸ್ಯರನ್ನು ಹೊಂದಿದೆ. ಚುನಾವಣೆಗೆ ಜೆಡಿಎಸ್ ಮತ್ತು ಬಿಜೆಪಿಯ 22 ಸದಸ್ಯರು ಹಾಜರಿದ್ದರು. ಕಾಂಗ್ರೆಸ್ನ ಐವರು ಹಾಗೂ ಪಕ್ಷೇತರ ಸದಸ್ಯೆ ಸೇರಿ 6 ಮಂದಿ ಗೈರು ಹಾಜರಾಗಿದ್ದರು.
ಸಂಧಾನ ಸಫಲ: ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನ ರತ್ನಮ್ಮ ಮತ್ತು ಆಶಾ ಲೋಕೇಶ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಇದರ ಲಾಭ ಕಾಂಗ್ರೆಸ್ ಪಡೆಯಬಾರದೆಂದು ನಿರ್ಧರಿಸಿದ ಜೆಡಿಎಸ್ ಮುಖಂಡರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು. ಗೋವಾ ಪ್ರವಾಸದ ನಂತರ ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ರತ್ನಮ್ಮ ಪರ ಹೆಚ್ಚಿನ ಸದಸ್ಯರ ಬಲ ಇರುವುದನ್ನು ಅರಿತು ಆಶಾ ಲೋಕೇಶ್ ಅವರನ್ನು ಕಣದಿಂದ ದೂರ ಉಳಿಯುವಂತೆ ಮಾಡುವಲ್ಲಿ ಯಶಸ್ವಿಯಾದರು.
ಜಿಪಂ ಅಧಿಕಾರದ ಅವಧಿ ಇನ್ನು 17 ತಿಂಗಳು ಬಾಕಿ ಉಳಿದಿದ್ದು ಮೂರು ಹಂತಗಳಲ್ಲಿ ಅಧಿಕಾರ ಹಂಚಿಕೆಗೆ ನಿರ್ಧರಿಸಿ ಮೊದಲು ರತ್ನಮ್ಮ, ನಂತರ ಆಶಾ ಮೂರನೇ ಸರದಿಗೆ ಬೇರೊಬ್ಬರಿಗೆ ಅವಕಾಶ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ ಏರ್ಪಟ್ಟಿದ್ದರಿಂದ ಮೊದಲು ಬಿಜೆಪಿಯ ಸೀಮೋಲ್ ಮೋಹನ್ ನಂತರ ಕಿಟ್ಟಪ್ಪನವರಿಗೆ ಅಧಿಕಾರ ಬಿಟ್ಟುಕೊಡಬೇಕೆಂಬ ನಿರ್ಧಾರಕ್ಕೆ ಬಂದ ನಂತರ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಬುಧವಾರ ಬೆಳಿಗ್ಗೆ ಜೆಡಿಎಸ್ನ ರತ್ನಮ್ಮ ಹಾಗೂ ಬಿಜೆಪಿಯ ಸೀಮೋಲ್ ಮೋಹನ್ ಅಧ್ಯಕ್ಷ-ಉಪಾಧ್ಯಕ್ಷೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಇವರಿಬ್ಬರ ಅವಿರೋಧ ಆಯ್ಕೆಯನ್ನು ಪ್ರಾದೇಶಿಕ ಆಯುಕ್ತ ಗೌರವ್ ಗುಪ್ತ ಪ್ರಕಟಿಸಿದರು.
ಶೆಟ್ಟರಿಗೆ ಕೈಕೊಟ್ಟ ಸದಸ್ಯೆ: ಮಾಲೂರು ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿಯವರು ಕಾಂಗ್ರೆಸ್ ಸೇರಿದಾಗ ಅವರೊಂದಿಗೆ ಗುರುತಿಸಿಕೊಂಡಿದ್ದ ಮಾಲೂರು ತಾಲೂಕಿನ ಸೀತಹಳ್ಳಿಯ ಯಲ್ಲಮ್ಮ ಮತ್ತೆ ಬಿಜೆಪಿಯ ಕ್ಯಾಂಪಿಗೆ ಸೇರಿ ಅಚ್ಚರಿ ಮೂಡಿಸಿದರು. ಬಿಜೆಪಿಯ ಸದಸ್ಯೆ ಆಗಿರುವ ಯಲ್ಲಮ್ಮ ಕೃಷ್ಣಯ್ಯಶೆಟ್ಟಿಗೆ ಬೆಂಬಲ ಸೂಚಿಸಿದ್ದರು. ಬದಲಾದ ರಾಜಕೀಯ ಹಿನ್ನಲೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಕೂಟಕ್ಕೆ ಜೈ ಹೇಳಿದ್ದಾರೆ. ಜೆಡಿಎಸ್ ಮುಖಂಡರು ಹಮ್ಮಿಕೊಂಡಿದ್ದ ಗೋವಾ ಪ್ರವಾಸಕ್ಕೂ ತೆರಳಿದ್ದರು.
ಅಧ್ಯಕ್ಷ ಸ್ಥಾನ ಮಾಲೂರು ತಾಲೂಕಿನವರಿಗೆ ಸಿಗಬೇಕೆಂಬ ಆಸೆಯಿಂದ ಹಾಗೂ ಜೆಡಿಎಸ್ ಬಿಜೆಪಿ ಮೈತ್ರಿ ಕೂಟದ ಆಡಳಿತ ರಚನೆಯಾದರೆ ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೈ ಬಲಪಡಿಸಿದಂತಾಗುತ್ತದೆ ಎಂಬ ಕಾರಣಕ್ಕೆ ಚುನಾವಣೆಯಲ್ಲಿ ಭಾಗವಹಿಸಿದ್ದಾಗಿ ಯಲ್ಲಮ್ಮ ಸಮರ್ಥನೆ ಮಾಡಿಕೊಂಡಿದ್ದಾರೆ. ಬಿಜೆಪಿಯ ಏಳು ಸದಸ್ಯರಲ್ಲಿ ಸೀಮೋಲ್ ಮೋಹನ್ ಈ ಹಿಂದೆಯೇ ಪಕ್ಷದ ಜಿಲ್ಲಾ ಮುಖಂಡರ ಸೂಚನೆ ಧಿಕ್ಕರಿಸಿ ಜೆಡಿಎಸ್ ಪರ ಮತ ಹಾಕಿದ್ದರು. ಇದರಿಂದಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗುವ ಅದೃಷ್ಟ ಸಂಪಾದಿಸಿದ್ದರು.
ಮಾಲೂರು ತಾಲೂಕಿನ ದುಡುವನಹಳ್ಳಿಯ ಕೆ. ಯಶೋಧ ಡಿ.ವಿ. ಕೃಷ್ಣಮೂರ್ತಿ ಬಿಜೆಪಿಯಿಂದ ಗೆದ್ದು ನಂತರ ಜೆಡಿಎಸ್ಗೆ ನಿಷ್ಠೆ ತೋರಿ ಪ್ರಸ್ತುತ ಜೆಡಿಎಸ್ ಬಿಜೆಪಿ ಮೈತ್ರಿ ಕೂಟದಲ್ಲಿ ಇದ್ದಾರೆ. ಶಾಸಕ ವರ್ತೂರ್ ಪ್ರಕಾಶ್ ಬಣದಿಂದ ಗೆದ್ದು ನಂತರ ಬಂಡಾಯವೆದ್ದ ಜಿ.ಎಸ್. ಅಮರನಾಥ್ ಕಳೆದ ಚುನಾವಣೆಯಲ್ಲಿ ಜೆಡಿಎಸ್ನ ತೂಪಲ್ಲಿ ನಾರಾಯಣಸ್ವಾಮಿ ಪರ ಮತ ಚಲಾಯಿಸಿದ್ದರು. ಈಗ ಜೆಡಿಎಸ್ ಬಿಜೆಪಿ ಮೈತ್ರಿ ಕೂಟಕ್ಕೆ ಬೆಂಬಲ ನೀಡಿದ್ದಾರೆ. ಪಕ್ಷೇತರ ಸದಸ್ಯ ಎಂ.ಎಸ್. ಆನಂದ್ ಬಿಜೆಪಿ ಸೇರಿ ಜಿಪಂನಲ್ಲಿ ಅನೇಕ ಅವಕಾಶಗಳನ್ನು ಬಾಚಿಕೊಳ್ಳುವಲ್ಲಿ ಸಫಲರಾಗಿದ್ದಾರಲ್ಲದೆ, ಜೆಡಿಎಸ್ನ ರತ್ನಮ್ಮ ಹಾಗೂ ಬಿಜೆಪಿಯ ಸೀಮೋಲ್ ಮೋಹನ್ ಅಧ್ಯಕ್ಷ-ಉಪಾಧ್ಯಕ್ಷರಾಗಲು ಸಹಕಾರ ನೀಡಿದ್ದಾರೆ.
ಅಪವಿತ್ರ ಮೈತ್ರಿ: ಪ್ರತಿ ಚುನಾವಣೆಯಲ್ಲಿ ಒಂದೊಂದು ರೀತಿಯ ರಾಜಕೀಯ ನಿರ್ಧಾರ ಕೈಗೊಂಡು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಸದಸ್ಯರು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಡುವ ಬದಲು ಅವಕಾಶವಾದಿಗಳ ಮೈತ್ರಿ ಕೂಟವೆಂದು ಕರೆದುಕೊಳ್ಳುವುದು ವಾಸಿ, ಬಿಜೆಪಿಯ ಕೆಲ ಸದಸ್ಯರು ಜೆಡಿಎಸ್ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಜನತೆಯ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆಂದು ಹೆಸರು ಹೇಳಲಿಚ್ಚಿಸದ ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement