ಚಿಕ್ಕಬಳ್ಳಾಪುರ: ಕಳೆದ 7 ತಿಂಗಳ ಹಿಂದೆ ಬಾಡಿಗೆಗೆ ಎಂದು ವಾಹನವನ್ನು ತೆಗೆದುಕೊಂಡು ಹೋಗಿ ನಾಪತ್ತೆಯಾಗಿದ್ದ ಆರೋಪದ ಮೇಲೆ ಇಲ್ಲಿನ ಸ್ವಾಮೀಜಿಯೊಬ್ಬರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ವಾಹನದ ರೂಪವನ್ನೇ ಬದಲಾಯಿಸಿದ್ದ ಸ್ವಾಮೀಜಿಯನ್ನು ಉತ್ತರ ಪ್ರದೇಶದ ಲಕ್ನೋದಲ್ಲಿ ಬಂಧಿಸಿ ಕರೆತರಲಾಗಿದೆ.
ಬಾಡಿಗೆ ವಾಹನ: ತಾಲೂಕಿನಲ್ಲಿ ಮಠಗಳಲ್ಲೊಂದಾದ ಬಿಸಾಘ್ನಿ ಮಠದಲ್ಲಿ ಪೂಜಾ ಕಾರ್ಯಗಳನ್ನು ಕೈಗೊಂಡು ಸಹಸ್ರಾರು ಭಕ್ತರನ್ನು ತನ್ನತ್ತ ಸೆಳೆದುಕೊಂಡಿದ್ದ ಸ್ವಾಮಿ ಬೀಜಯ್ ಸಿರಿಜ್ ಮಹಾರಾಜ್ (ನಾಗಾ ಬಾಬಾ) ಕಳೆದ 7 ತಿಂಗಳ ಹಿಂದೆ ನಗರದ ರವಿರವರಿಗೆ ಸೇರಿದ್ದ ಕ್ವಾಲೀಸ್ ವಾಹನವನ್ನು ಬಾಡಿಗೆಗೆ ಪಡೆದುಕೊಂಡಿದ್ದ.
ಎರಡು ತಿಂಗಳು ಆ ವಾಹನದಲ್ಲಿಯೇ ನಗರದಲ್ಲಿ ತಿರುಗಾಡಿಕೊಂಡಿದ್ದ ಸ್ವಾಮೀಜಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಮೊಬೈಲ್ಗೆ ಕರೆ ಮಾಡುತ್ತಿದ್ದರೂ ಸಹ ಸ್ವೀಕರಿಸುತ್ತಿರಲಿಲ್ಲ. ಒಂದೆರಡು ದಿನ ನೋಡಿದ ವಾಹನದ ಮಾಲೀಕರು ಮಠಕ್ಕೆ ಹೋಗಿ ಮಾಹಿತಿಯನ್ನು ಪಡೆದು ನಂತರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಲಕ್ನೋದಲ್ಲಿ ಬಂಧನ: ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸ್ವಾಮಿಗಾಗಿ ಹುಡುಕಾಡಿದರೂ ಆತ ಎಲ್ಲೂ ಸಿಗಲಿಲ್ಲ. ಕೊನೆಗೆ ದೊರೆತ ಮಾಹಿತಿ ಆಧರಿಸಿ ಉತ್ತರ ಪ್ರದೇಶದ ಲಕ್ನೋಗೆ ತೆರಳಿ ವಾಹನ ಸಮೇತ ಸ್ವಾಮೀಜಿಯನ್ನು ತಮ್ಮ ವಶಕ್ಕೆ ಪಡೆದುಕೊಂಡು ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಬಂದಿದ್ದಾರೆ. ವಾಹನವನ್ನು ಮಾಲೀಕರಿಗೆ ಕೊಡುವ ಅಗತ್ಯವಿಲ್ಲ ಎಂಬ ಭಾವನೆಯಲ್ಲಿ ಪರಾರಿಯಾಗಿದ್ದ ಸ್ವಾಮೀಜಿ ವಾಹನದ ಸ್ವರೂಪವನ್ನೇ ಬದಲಾಯಿಸಿದ್ದನು.
ಭಕ್ತರ ಆರೋಪ: ಪೊಲೀಸರು ಸ್ವಾಮೀಜಿಯನ್ನು ಬಂಧಿಸಿದ್ದಾರೆ ಎನ್ನುವುದು ತಿಳಿದುಕೊಂಡ ಹಲವರು ಠಾಣೆಗೆ ಆಗಮಿಸಿ, ತಾವು ಸ್ವಾಮೀಜಿಗೆ ಹಣ ಕೊಟ್ಟು ಮೋಸ ಹೋಗಿದ್ದೇವೆ ಎಂದು ಆರೋಪಿಸಿದರು.
Advertisement