ಪೊಲೀಸ್ ಮನೆಯಲ್ಲಿ ಕಳವು, ಪೊಲೀಸರ ಮೇಲೇ ಅನುಮಾನ!
ಚಿಕ್ಕಬಳ್ಳಾಪುರ: ಪೊಲೀಸರ ಮನೆಯಲ್ಲಿ ಹಾಡಹಗಲೇ ಸುಮಾರು 3 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೇ ಈ ಕಳ್ಳತನದ ಹಿಂದೆ ಪೊಲೀಸರ ಕೈವಾಡ ಇರಬಹುದೆಂಬ ಅನುಮಾನ ವ್ಯಕ್ತವಾಗಿರುವುದು ವಿಶೇಷವಾಗಿದೆ.
ನಗರದ ಪ್ರಶಾಂತ ನಗರದ ಪೊಲೀಸ್ ಕ್ವಾಟರ್ಸ್ನ ಬಿ 1 ಬ್ಲಾಕ್ ಕಟ್ಟಡದ ಮಹಡಿಯಲ್ಲಿರುವ ಮುಖ್ಯ ಪೇದೆ ಅಲ್ತಾಫ್ ಪಾಷಾ ಚಿನ್ನಾಭರಣ ಕಳೆದುಕೊಂಡವರು. ಪ್ರಕರಣ ನಡೆದು ಒಂದು ವಾರ ಕಳೆಯುತ್ತಿದ್ದರೂ ತನಿಖೆ ಚುರುಕಾಗಿ ನಡೆಯದ ಕಾರಣ ಇದೀಗ ಜಿಲ್ಲಾ ರಕ್ಷಣಾಧಿಕಾರಿಗಳ ಮೊರೆ ಹೋಗಿದ್ದಾರೆ.
ಘಟನೆ ಹಿನ್ನೆಲೆ: ಅಲ್ತಾಫ್ ಪಾಷಾರವರ ಪತ್ನಿ ಶಾಜೀಯಾ ಕೌಸರ್ ಜು.28 ರಂದು ಮಧ್ಯಾಹ್ನ 12 ಗಂಟೆಗೆ ಮಾರುಕಟ್ಟೆಗೆ ಹೋಗುವ ಸಂದರ್ಭದಲ್ಲಿ ತಮ್ಮ ಮನೆಯ ಬೀಗದ ಕೈಯನ್ನು ಎದುರು ಮನೆಯ ಮುಖ್ಯಪೇದೆ ಗಿರೀಶ್ ಎಂಬುವರ ಪತ್ನಿ ಲಕ್ಷ್ಮೀರವರ ಕೈಗೆ ಕೊಟ್ಟು ಹೋಗಿದ್ದರು. ನಂತರ ಮಧ್ಯಾಹ್ನ 3 ಗಂಟೆಗೆ ಬೀಗದ ಕೈಯನ್ನು ಪಡೆದು ಮನೆಗೆ ಬಂದಿದ್ದಾರೆ. ಸಂಜೆ 5 ಗಂಟೆಗೆ ರಂಜಾನ್ ಹಬ್ಬಕ್ಕಾಗಿ ನೆಂಟರ ಮನೆಗೆ ತೆರಳಲು ಬೀರುವಿನಲ್ಲಿದ್ದ ಒಡವೆ ನೋಡಿದಾಗ ಅವು ನಾಪತ್ತೆಯಾಗಿವೆ. ತಕ್ಷಣ ಪತಿಗೆ ಮಾಹಿತಿ ಕೊಟ್ಟಿದ್ದು ಅಲ್ತಾಫ್ ಪಾಷಾ ಮನೆಯ ಸಮೀಪದಲ್ಲಿಯೇ ಇರುವ ನಗರ ಠಾಣೆಗೆ ದೂರು ನೀಡಿದ್ದಾರೆ.
ಖಾಕಿ ಮೇಲೆ ಅನುಮಾನ: ಮನೆಯೊಳಗಿದ್ದ ಬೀರು ಬೀಗ ಹಾಕಿದಂತೆಯೇ ಇದೆ. ಆದರೆ, ಬೀರುವಿನಲ್ಲಿದ್ದ ಒಡವೆಗಳು ಕಳವಾಗಿವೆ. ಮನೆಯ ಸುತ್ತಮುತ್ತಲು ಪೊಲೀಸರ ಮನೆಗಳೇ ಇವೆ. ಜೊತೆಗೆ ಮನೆಯ ಬೀಗ ಒಡೆದಿಲ್ಲ. ಇದರಿಂದ ಪರಿಚಯದವರೇ ಆದ ಪೊಲೀಸನವರೇ ನಕಲಿ ಬೀಗದ ಕೈ ಬಳಸಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸುವ ಅಲ್ತಾಫ್ ಪಾಷಾ, ಜಿಲ್ಲಾ ರಕ್ಷಣಾಧಿಕಾರಿಗಳ ಗಮನಕ್ಕೆ ಘಟನೆಯ ವಿವಿರ ತಂದಿದ್ದು, ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ