ಬಂಗಾರಪೇಟೆ: ಕಳೆದ ತಿಂಗಳು ನಡೆದ ಇಲ್ಲಿನ ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಮಾತೃಪಕ್ಷಕ್ಕೆ ಕೈ ಕೊಟ್ಟು ಕಾಂಗ್ರೆಸನ್ನು ಬೆಂಬಲಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಆರೋಪದ ಮೇಲೆ ಮೂವರು ತಾಪಂ ಸದಸ್ಯರನ್ನು ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ಮಾರ್ಕಂಡೇಗೌಡ ತಿಳಿಸಿದ್ದಾರೆ. ತಾಪಂನಲ್ಲಿ ಬಿಜೆಪಿಗೆ ಅಧಿಕಾರ ಹಿಡಿಯುವಷ್ಟು ಸದಸ್ಯರ ಬಲವಿದ್ದರೂ ಮೀಸಲಿನಿಂದ ಅಧ್ಯಕ್ಷ ಸ್ಥಾನ ಸುಲಭವಾಗಿ ಕಾಂಗ್ರೆಸ್ ಪಾಲಾಯಿತು. ಆದರೆ ಉಪಾಧ್ಯಕ್ಷ ಸ್ಥಾನವೂ ಸದಸ್ಯರಲ್ಲಿನ ಗುಂಪುಗಾರಿಕೆಯಿಂದ ಕೈ ತಪ್ಪಿದೆ. ಕೇತಗಾನಹಳ್ಳಿ ಕ್ಷೇತ್ರದ ವಿಜಯಲಕ್ಷ್ಮೀ, ಕಂಗಾಂಡ್ಲಹಳ್ಳಿ ಕ್ಷೇತ್ರದ ಬಾಬು ಹಾಗೂ ಕ್ಯಾಸಂಬಳ್ಳಿ ಕ್ಷೇತ್ರದ ರಾಮಚಂದ್ರ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರಿಂದ ಪಕ್ಷದ ಅಭ್ಯರ್ಥಿ ಸೋಲಬೇಕಾಯಿತು. ಈ ಹಿನ್ನೆಯಲ್ಲಿ ಪಕ್ಷದ ತಾಲೂಕು ಘಟಕ ಹೈಕಮಾಂಡ್ಗೆ ದೂರು ನೀಡಿ ಮೂವರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಿತ್ತು. ಅದರಂತೆ ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಭೆ ಸೇರಿದ್ದ ಶಿಸ್ತು ಸಮಿತಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಮೂವರು ತಾಪಂ ಸದಸ್ಯರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಲು ನಿರ್ಧರಿಸಿ ಮೂವರಿಗೂ ನೋಟಿಸ್ ನೀಡಲಾಗಿದೆ.
Advertisement