ಮಾಲೂರು: ಜಿಲ್ಲೆಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ನೂತನ ಜಿಪಂ ಅಧ್ಯಕ್ಷೆ ರತ್ಮಮ್ಮ ನಂಜೇಗೌಡ ಹೇಳಿದರು.
ಜಿಪಂ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾಲೂರಿನಲ್ಲಿ ನಡೆದ ವಿಜಯೋತ್ಸವದಲ್ಲಿ ಮಾತನಾಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ವಂಕಟಶಿವಾರೆಡ್ಡಿ, ಮಾಜಿ ಸಚಿವ ಶ್ರೀನಿವಾಸ್ ಗೌಡ ಹಾಗೂ ಶಾಸಕ ಮಂಜುನಾಥ್ ಗೌಡರ ಪ್ರಯತ್ನದಿಂದ ಸಿಕ್ಕಿರುವ ಅಧಿಕಾರವನ್ನು ಚ್ಯುತಿ ಬಾರದಂತೆ ನಡೆಸುವುದಾಗಿ ತಿಳಿಸಿದರು.
ಆಯ್ಕೆಗೆ ಸಹಕರಿಸಿದ ಜಿಪಂ ಬಿಜೆಪಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲೆಯಲ್ಲಿ ಕಾಡುತ್ತಿರುವ ನೀರಿನ ಸಮಸ್ಯೆಗೆ ಪ್ರಥಮ ಅದ್ಯತೆ ನೀಡುವುದಾಗಿ, ಚೆಲಘಟ್ಟದಿಂದ ಜಿಲ್ಲೆಗೆ ನೀರು ಹರಿಸುವ ಯೋಜನೆಯಲ್ಲಿ ಕೈ ಬಿಟ್ಟಿರುವ ಮಾಲೂರು ತಾಲೂಕನ್ನು ಸೇರಿಸುವ ಪ್ರಯತ್ನ ಮಾಡಲಾಗುವುದು ಎಂದರು. ಶಾಸಕ ಮಂಜುನಾಥ್ ಗೌಡ ಮಾತನಾಡಿ, ರತ್ನಮ್ಮ ಜಿಪಂ ಅಧ್ಯಕ್ಷರಾಗಿರುವುದು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. ಕೋಚಿಮುಲ್ ನಿರ್ದೇಶಕ ನಂಜೇಗೌಡ, ಪುರಸಭೆ ಅಧ್ಯಕ್ಷೆ ಭಾರತಮ್ಮ ನಂಜುಂಡಪ್ಪ, ನಂಜುಂಡಪ್ಪ, ಆನೇಪುರ ಹನುಮಂತಪ್ಪ, ಪುರಸಭೆ ಸದಸ್ಯ ಅಲೂಮಂಜು, ರಾಮಚಂದ್ರ ಇದ್ದರು.
ಅದ್ಧೂರಿ ಮೆರವಣಿಗೆ: ಜಿಪಂ ಅಧ್ಯಕ್ಷರಾಗಿ ಆಯ್ಕೆಯಾದನಂತರ ಪಟ್ಟಣಕ್ಕೆ ಆಗಮಿಸಿದ ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡರನ್ನು ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.
ಡಾ.ರಾಜ್ವೃತ್ತದಿಂದ ಜಗಜ್ಯೋತಿ ಬಸವೇಶ್ವರ ವೃತ್ತದ ವರೆಗೆ ಶಾಸಕ ಮಂಜುನಾಥ್ ಗೌಡ ಹಾಗೂ ಜಿಪಂ ಅಧ್ಯಕ್ಷ ರತ್ನಮ್ಮರವರ ಪತಿ ಕೋಚಿಮುಲ್ ನಿರ್ದೇಶಕ ನಂಜೇಗೌಡರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
Advertisement