ಕೋಲಾರ: ಮಕ್ಕಳ ದೈಹಿಕ ಬೆಳವಣಿಗೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಗಳು ಸಹಕಾರಿಯಾಗಿವೆ ಎಂದು ವಕ್ಕಲೇರಿ ಗ್ರಾ.ಪಂ ಅಧ್ಯಕ್ಷ ರಾಜಪ್ಪ ತಿಳಿಸಿದರು.
ತಾಲೂಕಿನ ಗುಟ್ಟಹಳ್ಳಿಯಲ್ಲಿ ನಡೆದ ವಕ್ಕಲೇರಿ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿದ ಅವರು, ಕ್ರೀಡೆಗಳಿಂದಾಗಿ ಮಕ್ಕಳಲ್ಲಿ ಶೈಕ್ಷಣಿಕವಾಗಿಯೂ ಉತ್ಸಾಹ ಇಮ್ಮಡಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ದೇಶದಲ್ಲಿ ನೂರಿಪ್ಪತ್ತು ಕೋಟಿ ಜನಸಂಖ್ಯೆಯಿದ್ದರೂ ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಸಾಧನೆ ಸಾಲದು ಎಂದ ಅವರು, ಮಕ್ಕಳಲ್ಲಿ ಕ್ರೀಡಾಭಿರುಚಿ ಬೆಳೆಸಲು ಸರ್ಕಾರ ಅಗತ್ಯ ಸೌಲಭ್ಯ ನೀಡಬೇಕೆಂದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್, ಕಾಮನ್ವೆಲ್ತ್ ಕೂಟದಲ್ಲಿ ನಮ್ಮ ದೇಶ ಐದನೇ ರ್ಯಾಂಕ್ ಗಳಿಸಿದೆ, ಆದರೆ ಮುಂದಿನ ದಿನಗಳಲ್ಲಿ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದಲ್ಲಿ ಅದು ಪ್ರಥಮ ಸ್ಥಾನಕ್ಕೇರಲು ಅಡ್ಡಿಯಿಲ್ಲ ಎಂದು ತಿಳಿಸಿದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮಂಜುನಾಥ್, ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಕ್ರೀಡಾಭಿರುಚಿ ಬೆಳೆಸುವ ಮೂಲಕ ಅವರನ್ನು ಕ್ರೀಡಾರಂಗದಲ್ಲಿ ಉನ್ನತ ಸ್ಥಾನಕ್ಕೇರಿಸಬಹುದು ಎಂದರು. ಕ್ರೀಡಾಕೂಟದಲ್ಲಿ 15 ಶಾಲೆಗಳು ಪಾಲ್ಗೊಂಡಿದ್ದು, ಉಸ್ತುವಾರಿಯನ್ನು ಮುಖ್ಯ ಶಿಕ್ಷಕ ವೆಂಕಟೇಶಪ್ಪ ವಹಿಸಿದ್ದು, ಶಿಕ್ಷಕ ವೆಂಕಟರಾಮ್ ಸ್ವಾಗತಿಸಿ, ನಾರಾಯಣಸ್ವಾಮಿ ನಿರೂಪಿಸಿ, ಇಬ್ರಾಹಿಂ ಖಾನ್ ವಂದಿಸಿದರು.
Advertisement