ಗುಡಿಬಂಡೆ: ರಾಷ್ಟ್ರೀಯ ಹೆದ್ದಾರಿ 7ರಿಂದ ಪೋಲಂಪಲ್ಲಿ ಮೂಲಕ ತಾಲೂಕು ಕೇಂದ್ರ ಗುಡಿಬಂಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದ್ದು, ಕೂಡಲೇ ದುರಸ್ತಿಗೊಳಿಸುವಂತೆ ಒತ್ತಾಯಿಸಿ ಡಿವೈಎಫ್ಐ ನೇತೃತ್ವದಲ್ಲಿ ಗ್ರಾಮಸ್ಥರು ಪಟ್ಟಣದ ಜಿ.ಪಂ. ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಚಿಕ್ಕತಮ್ಮನ ಹಳ್ಳಿ ಗ್ರಾಮದ ಮುಖಂಡ, ಭಾಸ್ಕರ ರೆಡ್ಡಿ ಮಾತನಾಡಿ, ಸದರಿ ರಸ್ತೆ ಮೂಲಕ ಪ್ರತಿದಿನ ಸುತ್ತ ಮುತ್ತಲಿನ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಅಲ್ಲದೆ ವಿವಿಧ ಕಾರ್ಯಗಳ ನಿಮಿತ್ತ ಗ್ರಾಮಸ್ಥರು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಹಾಗೂ ತಾಲೂಕು ಕೇಂದ್ರವಾದ ಗುಡಿಬಂಡೆಗೆ ಪ್ರಯಾಣಿಸುತ್ತಾರೆ. ಈ ರಸ್ತೆಯಲ್ಲಿ ಸಾರಿಗೆ ನಿಗಮದ ಎರಡು ಬಸ್ಸುಗಳು ಪ್ರತಿದಿನ ಓಡಾಡುತ್ತವೆ. ಆದರೆ ರಸ್ತೆ ಹಾಳಾಗಿ ಹದಗೆಟ್ಟಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ. ಸುಮಾರು 9 ವರ್ಷಗಳಿಂದ ಡಾಂಬರು ಭಾಗ್ಯ ಕಂಡಿಲ್ಲ. ಈ ರಸ್ತೆ ಅಭಿವೃದ್ಧಿ ಬಗ್ಗೆ ಗಮನ ಹರಿಸುವಂತೆ ಜನಪ್ರತಿನಿಧಿಗಳೂ ಸೇರಿದಂತೆ, ವಿವಿಧ ಅಧಿಕಾರಿಗಳಿಗೆ ಹಲವಾರು ಬಾರಿ ಲಿಖಿತ ರೂಪದ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದರು.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಪೋಲಂಪಲ್ಲಿ ರಸ್ತೆ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಿಗೆ ಒಂದು ಪ್ರಮುಖವಾದ ಸಂಪರ್ಕ ಕೊಂಡಿಯಾಗಿದ್ದು, ರಸ್ತೆ ದುರಸ್ತಿ ಬಗ್ಗೆ ಶೀಘ್ರ ಕಾಮಗಾರಿ ಪ್ರಾರಂಭಿಸಬೇಕೆಂದು ಡಿವೈಎಫ್ಐ ಮುಖಂಡ ಶಿವಪ್ಪ ಒತ್ತಾಯಿಸಿದರು. ದೇವರಾಜ್, ಈಶ್ವರಪ್ಪ, ರಹಮತ್, ಮಂಜುನಾಥ್, ಜಯಚಂದ್ರ, ಪೂಜಪ್ಪ, ಶ್ರೀರಾಮರೆಡ್ಡಿ, ನಾಗಪ್ಪ, ಗಂಗಪ್ಪ, ಅಶ್ವತ್ಥಪ್ಪ, ಶ್ರೀನಿವಾಸ, ಭಾಸ್ಕರ್ ಸಣ್ಣಯ್ಯ, ಕೆಂಪರೆಡ್ಡಿ, ವೆಂಕಟರಾಯಪ್ಪ, ಅಂಜಿನಪ್ಪ, ಆದಿನಾರಾಯಣ ಮತ್ತು ಮೇಡಿಮಾಕಲಹಳ್ಳಿ, ಗಿಡ್ಡಪ್ಪನಹಳ್ಳಿ, ಜಂಗಾಲಹಳ್ಳಿ, ಪೋಲಂಪಲ್ಲಿ, ಅಪ್ಪಿರೆಡ್ಡಿಹಳ್ಳಿ, ಚಿಕ್ಕತಮ್ಮನ ಹಳ್ಳಿ, ಬೊಮ್ಮನಹಳ್ಳಿ, ನಡುವನಹಳ್ಳಿ, ಸದಾಶಿವನಹಳ್ಳಿ ಹಾಗೂ ಕೊಪ್ಪಕಾಟೇನ ಹಳ್ಳಿ ಗ್ರಾಮಗಳ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಇದ್ದರು.
ಅನುದಾನ: ಪ್ರತಿಭಟನಾಕಾರರ ಮನವಿ ಆಲಿಸಿದ ಜಿ.ಪಂ. ಕಾರ್ಯನಿರ್ವಾಹಕ ಎಂಜಿನಿಯರ್ ಸುಂದರೇಶ್, ರಸ್ತೆ ನಿರ್ವಹಣೆಗೆಂದು ಎಂಟು ಲಕ್ಷ ರು. ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದೆಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
Advertisement