ಚಿಂತಾಮಣಿ: ಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಆಡಳಿತ ಹಿಡಿದಿದೆ.
ತಾಲೂಕಿನ ವ್ಯವಸಾಯೋತ್ಪನ್ನ ಸಹಕಾರ ಸಂಘದ ಉಳಿದ ಕಾಲಾವಧಿಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಬಿ.ಎನ್. ಶ್ರೀನಿವಾಸಪ್ಪ ಅಧ್ಯಕ್ಷರಾಗಿ ಆಯ್ಕೆಯಾದರು. ಸಂಘ ಪ್ರಾರಂಭವಾದ 1949 ರಿಂದಲೂ ಮಾಜಿ ಸಚಿವ ದಿವಂಗತ ಕೆ.ಎಂ. ಕೃಷ್ಣಾರೆಡ್ಡಿ ಮತ್ತು ಮಾಜಿ ಶಾಸಕ ಸುಧಾಕರ್ ಅವರ ಆಡಳಿತದ ಹಿಡಿತದಲ್ಲಿದ್ದ ಟಿಎಪಿಎಂಎಸ್ನ್ನು ಪ್ರಥಮ ಬಾರಿಗೆ ಬಿಜೆಪಿ ವಶಪಡಿಸಿಕೊಂಡಿದೆ. ಬುಧವಾರ ಬೆಳಿಗ್ಗೆ ಚುನಾವಣೆ ಪ್ರಕ್ರಿಯೆ ನಡೆದು ಸಂಘದಲ್ಲಿ ಒಟ್ಟು 12 ನಿರ್ದೇಶಕರಿದ್ದು, ಬಿಜೆಪಿಯ ಏಕೈಕ ಅಭ್ಯರ್ಥಿ ಬಿ.ಎನ್. ಶ್ರೀನಿವಾಸಪ್ಪ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಆಯ್ಕೆಯನ್ನು ಘೋಷಿಸಿದರು.
ಶ್ರೀನಿವಾಸಪ್ಪ ಆಯ್ಕೆಯಾದ ಕೂಡಲೇ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಟಿಎಪಿಎಂಎಸ್ ಕಚೇರಿ ಮುಂಭಾಗದಲ್ಲಿ ವಿಜಯೋತ್ಸವ ಆಚರಿಸಿದರು. ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಬಿ.ಎನ್. ಶ್ರೀನಿವಾಸಪ್ಪ ಮಾತನಾಡಿ, ಸತತವಾಗಿ 25 ವರ್ಷಗಳಿಂದ ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿದ ಪರಿಣಾಮ ಅಧ್ಯಕ್ಷ ಸ್ಥಾನ ದೊರೆತಿದ್ದು, ಇದಕ್ಕೆ ಸಹಕರಿಸಿದ ಡಿಸಿಸಿ ಬ್ಯಾಂಕಿನ ನಿರ್ದೇಶಕ ಸತ್ಯನಾರಾಯಣಮಹೇಶ್ಗೆ ಅಭಿನಂದನೆ ಸಲ್ಲಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸತ್ಯನಾರಾಯಣ ಮಹೇಶ್ ಮಾತನಾಡಿ, ಹಲವು ವರ್ಷಗಳ ಹೋರಾಟದ ಫಲವಾಗಿ ಬಿಜೆಪಿಗೆ ದಕ್ಕ ಜಯ ಇದಾಗಿದೆ. ಈಗಾಗಲೇ ತಾಲೂಕಿನ ವ್ಯಾಪ್ತಿಯ ರೈತರಿಗೆ ರಸಗೊಬ್ಬರ ವಿತರಿಸಲು ಅನುಕೂಲವಾಗುವ ರೀತಿಯಲ್ಲಿ ಸಹಕಾರಿ ಸಂಘಗಳನ್ನು ತೆರೆಯಲಾಗಿದ್ದು, ರಿಯಾಯಿತಿ ದರದಲ್ಲಿ ನೀಡುವುದಾಗಿ ಹೇಳಿದರು. ನಗರದ ಪ್ರಮುಖ ಬೀದಿಗಳಲ್ಲಿ ನೂತನ ಅಧ್ಯಕ್ಷ ಬಿ.ಎನ್. ಶ್ರೀನಿವಾಸ್ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಸತ್ಯನಾರಾಯಣ ಮಹೇಶ್ರನ್ನು ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಮಾಡಿದರು. ಗೋವಿಂದ್, ವೆಂಕಟರವಣ, ಹಾದಿಗೆರೆ ತಿಮ್ಮಣ್ಣ ಇದ್ದರು.
Advertisement