ಕೋಲಾರ: ರೇಷ್ಮೆ ಇಲಾಖೆಯಿಂದ ರೈತರಿಗೆ ನೀಡಬೇಕಾದ ಬಾಕಿ ಸಹಾಯಧನ ಮತ್ತು ಪ್ರೋತ್ಸಾಹ ಧನವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ, ಕೋಲಾರ ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ನಿಯೋಗವು ಬೆಂಗಳೂರಿನಲ್ಲಿ ರೇಷ್ಮೆ ಇಲಾಖೆಯ ಅಭಿವೃದ್ಧಿ ಆಯುಕ್ತ ಜಿ. ಸತೀಶ್ ಮತ್ತು ಜಂಟಿ ನಿರ್ದೇಶಕ ಎಚ್.ಆರ್. ಪ್ರಭಾಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ರೇಷ್ಮೆಹುಳು ಸಾಕಾಣಿಕ ಮನೆಯ ಸಹಾಯ ಧನ, ರೇಷ್ಮೆ ತೋಟಕ್ಕೆ ಹನಿ ನೀರಾವರಿಗೆ ಸಹಾಯ ಧನ, ಸಲಕರಣೆಗಳ ಸಹಾಯ ಧನ, ಚಂದ್ರಂಕಿಗಳ ಸಹಾಯ ಧನ, ಹಿಪ್ಪುನೇರಳೆ ಸಸಿ ನರ್ಸರಿ ಸಹಾಯಧನ, ಸೊಂಕು ನಿವಾರಣಕಗಳ ವಿತರಣೆ, ರೇಷ್ಮೆಗೂಡಿಗೆ ನೀಡುವ ಪ್ರೋತ್ಸಾಹ ಧನವು ರೈತರಿಗೆ ಸಕಾಲದಲ್ಲಿ ತಲುಪದೇ ಇರುವುದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಶೀಘ್ರವಾಗಿ ಬಾಕಿ ಇರುವ ಸಹಾಯಧನ ಮತ್ತು ಪ್ರೋತ್ಸಾಹ ಧನವನ್ನು ನೀಡಬೇಕೆಂದು ಸಂಘದ ಮುಖಂಡರು ಆಗ್ರಹಿಸಿದರು. ನಿಯೋಗದಲ್ಲಿ ಕೋಲಾರ ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಎನ್. ನಾರಾಯಣ ಸ್ವಾಮಿ, ಮಾಜಿ ಅಧ್ಯಕ್ಷ ಮುನಿಸೊಣ್ಣಪ್ಪ, ಗೌರವಾಧ್ಯಕ್ಷರಾದ ಆಲಹಳ್ಳಿ ವೆಂಕಟೇಶಪ್ಪ, ಜಿಲ್ಲಾ ಕಾರ್ಯದರ್ಶಿ ಸಿ.ಎಲ್.ನಾಗರಾಜ್, ಕೋಲಾರ ತಾಲೂಕು ಅಧ್ಯಕ್ಷ ಎ.ಅರ್ಜುನನ್, ಬಂಗಾರಪೇಟೆಯ ಎಂ. ರಮೇಶ್, ಮುಖಂಡರಾದ ನಿದರಮಂಗಲ ನಾಗಪ್ಪ ಇದ್ದರು.
Advertisement