ಕೋಲಾರ/ಶ್ರೀನಿವಾಸಪುರ: ತೀವ್ರ ಕುತೂಹಲ ಕೇರಳಿಸಿದ್ದ ಶ್ರೀನಿವಾಸಪುರ ತಾಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಶನಿವಾರ ನಡೆದಿದ್ದು ಜೆಡಿಎಸ್ ವಶದಲ್ಲಿದ್ದ ಆಡಳಿತವನ್ನು ಕಾಂಗ್ರೆಸ್ ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ತಾಪಂ ಮೂರನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ನ ಗುರಪ್ಪ ಹಾಗೂ ಉಪಾಧ್ಯಕ್ಷರಾಗಿ ಅಡ್ಡಗಲ್ ನಾಗರಾಜ್ ಆಯ್ಕೆಯಾಗಿದ್ದಾರೆ. 17 ಸದಸ್ಯ ಬಲ ಹೊಂದಿರುವ ಶ್ರೀನಿವಾಸಪುರ ತಾಪಂನಲ್ಲಿ ಸಾರ್ವತ್ರಿಕ ಚುನಾವಣೆ ನಡೆದಾಗ ಜೆಡಿಎಸ್ನಿಂದ ಹತ್ತು ಸದಸ್ಯರು ಆಯ್ಕೆಯಾಗಿದ್ದರು. ಕಾಂಗ್ರೆಸ್ನಿಂದ ಕೇವಲ ಏಳು ಸದಸ್ಯರು ಆಯ್ಕೆಗೊಂಡಿದ್ದರಿಂದ ಜೆಡಿಎಸ್ ಎರಡು ಬಾರಿ ಅಂದರೆ 40 ತಿಂಗಳು ತಾಪಂ ಆಡಳಿತವನ್ನು ತನ್ನದಾಗಿಸಿಕೊಂಡಿತ್ತು. ಪುಲಗೂರು ಕೋಟೆ ತಾಪಂ ಕ್ಷೇತ್ರದ ಜೆಡಿಎಸ್ ಸದಸ್ಯ ಗಂಗಾಧರಪ್ಪ ಅವರ ಅಕಾಲಿಕ ನಿಧನದಿಂದ ಜೆಡಿಎಸ್ ಸಂಖ್ಯೆ ಬಲ 9ಕ್ಕೆ ಇಳಿಯಿತು. ಯಲ್ದೂರು ತಾಪಂ ಸದಸ್ಯೆ ಜೆಡಿಎಸ್ನ ಜಿ.ಕೆ.ಪುಷ್ಪ ಅವರು ಸರ್ಕಾರಿ ನೌಕರಿ ಸಿಕ್ಕಿದ್ದರಿಂದ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವುದರಿಂದ ಜೆಡಿಎಸ್ ಸಂಖ್ಯೆ ಪ್ರಸ್ತುತ 8ಕ್ಕೆ ಕುಸಿದಿದೆ. 7 ಸದಸ್ಯರಿದ್ದ ಕಾಂಗ್ರೆಸ್ ಪುರುಗೂರುಕೋಟೆ ತಾಪಂ ಕ್ಷೇತ್ರದ ಉಪಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನಾಗಿ ಕೆ.ಕೆ.ಮಂಜುನಾಥರೆಡ್ಡಿ ಅವರನ್ನು ಕಣಕ್ಕೆ ಇಳಿಸಿ ಜಯ ಸಾಧಿಸಿದ ಪರಿಣಾಮ ಇದರಿಂದ ಕಾಂಗ್ರೆಸ್ ಸಂಖ್ಯಾ ಬಲ 8ಕ್ಕೆ ಏರಿತು.
ನ್ಯಾಯಾಂಗ-ಪೊಲೀಸ್ ಮಧ್ಯಸ್ಥಿಕೆ: ಸುಖಾಂತ್ಯ ಕಂಡ ಹಳೆ ವಿವಾದ
ಕೋಲಾರ: ನಗರದ ಜಿಪಂ ಮುಂಭಾಗದಲ್ಲಿರುವ ಲಾರಿ-ಟೆಂಪೋ ನಿಲ್ದಾಣದ ಸಮೀಪ ಕಳೆದ 35 ವರ್ಷಗಳ ಹಿಂದೆ ಫಲಾನುಭವಿಗಳಿಗೆ ನಗರಸಭೆಯಿಂದ ಮಂಜೂರು ಆಗಿದ್ದ ನಿವೇಶನಗಳನ್ನು ಲಾರಿ ಮಾಲೀಕರ ಸಂಘದ ಹಿಡಿತದಿಂದ ಬಿಡಿಸಿಕೊಡುವಲ್ಲಿ ನ್ಯಾಯಾಲಯ ಮತ್ತು ಪೊಲೀಸ್ ಇಲಾಖೆ ಸಫಲವಾಗಿದೆ. ಟ್ರಕ್ ಟರ್ಮಿನಲ್ಗೆ ನಗರಸಭೆಯಿಂದ ನೀಡಿರುವ ಜಾಗದಲ್ಲಿ ತಮಗೆ ಸೇರಿದ ನಿವೇಶನಗಳಿದ್ದು ಅದನ್ನು ಬಿಡಿಸಿಕೊಡುವಂತೆ ಮನಿಯಲ್ಲಪ್ಪ, ವೆಂಕಟಸ್ವಾಮಿ ಮತ್ತು ನಾರಾಯಣಮ್ಮ ಎಂಬುವರು ನ್ಯಾಯಾಲಯದ ಮೊರೆಹೊಗಿದ್ದರು. ಅಹವಾಲು ಆಲಿಸಿದ ಸಿ.ಜೆ.ಎಂ ನ್ಯಾಯಾಲಯವು ಈ ಮೂರು ಮಂದಿಗೆ ಸೇರಬೇಕಾದ ನಿವೇಶನಗಳನ್ನು ಸರ್ವೇನಡೆಸಿ, ಗಡಿ ಗುರುತಿಸಿ ಅವರ ಸುಪರ್ಧಿಗೆ ಒಪ್ಪಿಸಬೇಕೆಂದು ನಗರಸಭೆಗೆ ಸೂಚಿಸಿತ್ತಲ್ಲದೆ, ಪೊಲೀಸ್ ಬಂದೋಬಸ್ತ್ ಪಡೆಯಬೇಕೆಂದು ನಿರ್ದೇಶನ ನೀಡಿತ್ತು. ಇದರಂತೆ ನ್ಯಾಯಾಲಯದ ಅಮೀನಗಳಾದ ಎಂ. ಮಂಜುನಾಥ್, ಚಂದ್ರಶೇಖರ್, ಕೆ.ಎಂ. ನಾಗರಾಜ ಹಾಗೂ ಸಿಬ್ಬಂದಿ ಶನಿವಾರ ಸ್ಥಳಕ್ಕೆ ಆಗಮಿಸಿ ಸರ್ವೇ ಕಾರ್ಯ ನಡೆಸಿದ್ದರು. ನ್ಯಾಯಾಲಯದ ಸೂಚನೆಯಂತೆ ನಗರ ಸಿಪಿಐ ಪಿ. ಶಿವಕುಮಾರ್, ಗಲ್ಪೇಟೆ ಪಿಎಸ್ಐ ಫಾರೂಕ್ ಹಾಗೂ ಸಿಬ್ಬಂದಿ ರಕ್ಷಣೆ ಒದಗಿಸಿದ್ದರು. ಈ ನಡುವೆ ಲಾರಿ ಮಾಲೀಕರ ಸಂಘದವರು ಜಮಾಯಿಸಿ ಸಂಘಕ್ಕೆ ನೀಡಿರುವ ಜಾಗದಲ್ಲಿ ಅರ್ಜಿದಾರರ ನಿವೇಶನಗಳಿಲ್ಲ, ಸಂಘಕ್ಕೆ ಸೇರಿದ ಆಸ್ತಿ ಎಂದು ವಾದಿಸಿದರು. ಇದಕ್ಕೆ ಪ್ರತಿಯಾಗಿ 3 ಮಂದಿ ನಿವೇಶನದಾರರ ಪರವಾಗಿ ಬಂದಿದ್ದ ಕೆಲವರು ನ್ಯಾಯಾಲಯದಿಂದ ಆಗಿರುವ ಆದೇಶವನ್ನು ತಿಳಿಸಿ ನಿವೇಶನ ಬಿಟ್ಟುಕೊಡುವಂತೆ ಆಗ್ರಹಿಸಿದರು.
ಸರ್ವೇ ನಡೆದು 3 ನಿವೇಶನಗಳ ಗಡಿ ಗುರುತಿಸುವವರೆಗೂ ಯಾವುದೇ ಸಮಸ್ಯೆಯಾಗಲಿಲ್ಲ. ಆದರೆ ಗುರುತಿಸಿದ ಜಾಗದುದ್ದಕ್ಕೂ, ಜೆಸಿಬಿಯಲ್ಲಿ ಕಾಲುವೆ ರೀತಿಯ ಹಳ್ಳ ತೋಡಲು ಮುಂದಾದಾಗ ಗಲಾಟೆ ಪ್ರಾರಂಭವಾಯಿತು.
ಅಷ್ಟೊತ್ತಿಗೆ ಈ 3 ನಿವೇಶನಗಳ ಸುತ್ತ ಗಡಿ ಗುರುತಿಸಿದ ಜಾಗದಲ್ಲಿ ಜೆಸಿಬಿ ಬಳಸಿ ಪಾಯ ತೋಡುವ ಕೆಲಸ ಮುಗಿದಿತ್ತು, ಆದರೆ ಇಲ್ಲಿ ಕಾಂಪೌಂಡ್ ಹಾಕಲು ತರಿಸಲಾಗಿದ್ದ ಕಲ್ಲು ಚಪ್ಪಡಿಗಳು ತುಂಬಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
Advertisement