ಎನ್ .ವೆಂಕಟೇಶ್
ಚಿಕ್ಕಬಳ್ಳಾಪುರ: ಇದೀಗ ಜಿಲ್ಲಾದ್ಯಂತ ಊರ ಜಾತ್ರೆಯ ಸಂಭ್ರಮ ಕಂಡು ಬರುತ್ತಿದೆ. ಪ್ರಮುಖವಾಗಿ ಉತ್ತಮ ಮಳೆಗಾಗಿ ಪ್ರಾರ್ಥಿಸಿ ಗ್ರಾಮದೇವತೆಗಳನ್ನು ಆರಾಧಿಸಲಾಗುತ್ತಿದೆ.
ಪ್ರತಿ ವರ್ಷ ಆಷಾಡ ಮಾಸದಲ್ಲಿ ಗ್ರಾಮ ದೇವತೆಗಳನ್ನು ಪ್ರತಿಷ್ಠಾಪಿಸಿ, ಆ ನಂತರ ಮೆರವಣಿಗೆ ನಡೆಸಿ ಎರಡು ದಿನಗಳ ಕಾಲ ಜಾತ್ರೆ ನಡೆಸಲಾಗುತ್ತಿದೆ. ಈ ವರ್ಷ ಊರ ಜಾತ್ರೆಗಳನ್ನು ಇನ್ನೂ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕಾರಣ, ಸಮರ್ಪಕವಾಗಿ ಮಳೆಯಾಗದಿರುವುದು. ಪ್ರಸ್ತುತ ಮಳೆ ಕೊರತೆಯ ಆತಂಕ ಎದುರಾಗಿದೆ. ಈಗಾಗಲೇ ಗೌರಿಬಿದನೂರು, ಶಿಡ್ಲಘಟ್ಟ ಮತ್ತು ಗುಡಿಬಂಡೆ ತಾಲೂಕಿನ ವಿವಿಧೆಡೆ ಗ್ರಾಮ ದೇವತೆಗಳ ಜಾತ್ರೆಗಳನ್ನು ಅದ್ಧೂರಿಯಾಗಿ ಪ್ರಾರಂಭವಾಗಿದ್ದು, ಉಳಿದೆಡೆ ಜೂ.21ರಿಂದ ಜೂ.29 ರವರೆಗೆ ಜಾತ್ರೆಗಳನ್ನು ನಡೆಸಲಾಗುತ್ತಿದೆ. ಗ್ರಾಮ ದೇವತೆಗಳಾದ ಗಂಗಮ್ಮ, ಸಪ್ಪಲಮ್ಮ, ಮುತ್ಯಾಲಮ್ಮ, ಮಹಾಕಾಳಿ, ಮಾತೆ ಅಣ್ಣಮ್ಮ, ಮಾರಮ್ಮ ಮೂರ್ತಿಗಳ ಪ್ರತಿಷ್ಠಾಪನೆಯಿಂದ ದೇವರ ಆರಾಧನೆಯನ್ನು ಕೈಗೊಳ್ಳಲಾಗುತ್ತಿದೆ.
ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿ. ಯುವಕರ ಸಂಘ, ಶ್ರೀ ಅಣ್ಣಮ್ಮ ಜಾತ್ರೆ ಸೇವಾ ಸಮಿತಿ, ಸಂತೆ ಮಾರ್ಕೆಟ್ ಯುವಕರ ಸಂಘ, ಗ್ರಾಮ ದೇವತೆಗಳ ಜಾತ್ರೆ ಸಮಿತಿ, ಇಂದಿರಾ ನಗರ ಬಡಾವಣೆ, ಅಂಬೇಡ್ಕರ್ ಕಾಲೋನಿ ಸೇರಿದಂತೆ ಹಲವೆಡೆ ಗ್ರಾಮ ಜಾತ್ರೆಗಳನ್ನು ಅದ್ದೂರಿಯಾಗಿ ಕೈಗೊಳ್ಳಲಾಗುತ್ತಿದೆ.
ಜಾತ್ರೆಯ ಮೊದಲನೇ ದಿನ ಶಾಂತಿಗೆ ಹೆಸರಾದ ದೇವರನ್ನು ಒಲಿಸಿಕೊಳ್ಳುವ ಕೆಲಸವಾಗುತ್ತದೆ. ಇದಕ್ಕಾಗಿ ವಿವಿಧ ಬಡಾವಣೆಗಳಿಂದ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ತಂಬಿಟ್ಟು ದೀಪಗಳನ್ನು ಮನೆಯಿಂದ ತಯಾರಿಸಿಕೊಂಡು ಬರಲಿದ್ದು, ಉಪವಾಸ ವ್ರತದಲ್ಲಿ ನಗರದಲ್ಲಿರುವ ವಿವಿಧ ದೇವಾಲಯಗಳಿಗೆ ತೆರಳುತ್ತಾರೆ. ತಂಬಿಟ್ಟಿನ ದೀಪವನ್ನು ಬೆಳಗಿಸಿ ಹರಕೆಯನ್ನು ಹೊರುತ್ತಾರೆ. ಈ ದೀಪಗಳನ್ನು ಹೊತ್ತು ದೇವರನ್ನು ಪ್ರಾರ್ಥಿಸಿದಾಗ ಹರಕೆಗಳು ಈಡೇರುತ್ತವೆ. ಮದುವೆ, ಸಂತಾನ ಭಾಗ್ಯ, ಆರೋಗ್ಯ ಭಾಗ್ಯ ದೊರೆಯುತ್ತದೆ. ಕಾಡುತ್ತಿರುವ ಸಂಕಷ್ಟಗಳು ಪರಿಹಾರವಾಗುತ್ತವೆ ಎನ್ನುವುದು ಅನೇಕ ಭಕ್ತರ ನಂಬಿಕೆ. ಈ ಹಿನ್ನೆಲೆಯಲ್ಲಿ ಪ್ರತಿ ಮನೆಯಿಂದ ದೀಪಗಳನ್ನು ಹೊತ್ತು ಬರುವಂತಹುದು ಹೆಚ್ಚಾಗುತ್ತಿದೆ.
ಎರಡನೇ ದಿನ ದೇವರ ಆರಾಧನೆಯ ಜೊತೆಗೆ ಬಾಡೂಟ ಘಮಘಮ ಕಂಡು ಬರುತ್ತಿದೆ. ನಿಗದಿತ ಪ್ರದೇಶಗಳಲ್ಲಿ ದೇವತೆಗಳ ಮೂರ್ತಿಗಳನ್ನಿಟ್ಟು ಸಾಮೂಹಿಕವಾಗಿ ಕುರಿ, ಕೋಳಿ, ಮೇಕೆಯನ್ನು ಬಲಿ ನೀಡಲಾಗುತ್ತದೆ. ಪ್ರಾಣಿ ಬಲಿಯನ್ನು ತೆಗೆದುಕೊಂಡು ಗ್ರಾಮ ದೇವತೆಗಳು ಸಂತೃಪ್ತಗೊಂಡಾಗ ಉತ್ತಮ ಮಳೆ ಬೆಳೆಯಾಗುತ್ತದೆ ಎಂಬ ಭಾವನೆಯಲ್ಲಿ ಮೂಕಜೀವಿಗಳ ಪ್ರಾಣ ಹರಣ ಮಾಡಲಾಗುತ್ತದೆ. ಕೊನೆಯ ದಿನ ಮೂರ್ತಿಗಳನ್ನು ಮನೆ ಮನೆಗಳ ಬಳಿಗೆ ಯುವಕರು ಹೊತ್ತುಕೊಂಡು ಹೋಗುತ್ತಾರೆ.
ಈ ಹಿಂದಿನಿಂದಲೂ ಊರಿನ ಜಾತ್ರೆಗಳನ್ನು ಹಿರಿಯರು ತಿಳಿಸಿರುವ ಸಂಪ್ರದಾಯದಂತೆ ನಡೆಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ಮಳೆ ಅಭಾವ ಕಂಡು ಬಂದ ಸಂದರ್ಭದಲ್ಲಿ ಊರ ಜಾತ್ರೆಗಳನ್ನು ಕೈಗೊಂಡಾಗ ಮಳೆ ಸುರಿದ ನಿದರ್ಶನಗಳೂ ಇವೆ. ಇದರಿಂದ ಗ್ರಾಮ ಮತ್ತು ನಗರಗಳು ಸಮೃದ್ಧಿಯಾಗಿರಲು ಜಾತ್ರೆ ಮೂಲಕ ದೇವತೆಗಳನ್ನು ಪ್ರಾರ್ಥಿಸಲಾಗುತ್ತದೆ.