ನಾವಿದ್ದೇವೆ ಧೈರ್ಯದಿಂದಿರಿ

Updated on: 

ಕೋಲಾರ: ಅತ್ಯಾಚಾರಿಗಳನ್ನು ಮಟ್ಟ ಹಾಕಲು ನಾವಿದ್ದೇವೆ. ನೀವು ಧೈರ್ಯವಾಗಿರಿ, ಯಾರಾದರೂ ನಿಮ್ಮನ್ನು ಕಾಡಿಸಿ ಪೀಡಿಸಿದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ನಿಮ್ಮ ರಕ್ಷಣೆಗೆ ನಾವು ಬರುತ್ತೇವೆ. ಈ ರೀತಿ ವಿದ್ಯಾರ್ಥಿನಿಯರಿಗೆ ಧೈರ್ಯ ನೀಡಿದ್ದು ನಗರದ ಗಲ್ ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಫಾರೂಕ್ ಪಾಷಾ ಅವರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸೋಮವಾರ ಅತ್ಯಾಚಾರ ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಅಪರಿಚಿತರು ಇಲ್ಲವೇ ಪರಿಚಿತರು ನಿಮ್ಮನ್ನು ಕಾಡಿದಲ್ಲಿ ಧೈರ್ಯವಾಗಿ ದೂರು ನೀಡಿದಲ್ಲಿ ಆರೋಪಿಗಳನ್ನು ಸದೆ ಬಡೆಯುತ್ತೆವೆಂದರು.
ಮನೆಗಳಿಂದ ಕಾಲೇಜಿಗೆ ಬರುವಾಗ ಒಂಟಿಯಾಗಿ ಬರಬೇಡಿ, ಸಾಧ್ಯವಾದರೆ ಪೋಷಕರು ಇಲ್ಲವೇ ಸಹಪಾಠಿಗಳೊಂದಿಗೆ ಬನ್ನಿ, ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಅಪರಿಚಿತರ ಬಗ್ಗೆ ಜಾಗ್ರತೆ ವಹಿಸುವಂತೆ ಸಲಹೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಆಂಜನಪ್ಪ ಮಾತನಾಡಿ, ಕಾಲೇಜಿನ ಸಮೀಪ ಪೊಲೀಸರು ಆಗಾಗ ಗಸ್ತು ತಿರುಗಿದಲ್ಲಿ ಪುಂಡರ ಹಾವಳಿ ತಪ್ಪುತ್ತದೆ. ಕಾಲೇಜಿನ ಸಿಬ್ಬಂದಿ ಹಾಗೂ ಅಧ್ಯಾಪಕ ವರ್ಗದವರು ಮಕ್ಕಳ ಬಗ್ಗೆ ನಿಗಾ ವಹಿಸುತ್ತೇವೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನವಿಡಬೇಕೆಂದರು.
ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಇಲ್ಲವೇ ಹೊರಗಡೆ ಯಾರಿಂದಲಾದರೂ ತೊಂದರೆ ಆದಲ್ಲಿ ಕೂಡಲೇ ದೂರು ನೀಡಬೇಕು. ನಾವು ನಿಮ್ಮ ಪರವಾಗಿ ಪೊಲೀಸರಿಗೆ ತಿಳಿಸುತ್ತೇವೆಂದು ಭರವಸೆ ನೀಡಿದರು.
ಅತ್ಯಾಚಾರ ತಡೆ ಅರಿವು ಕಾರ್ಯಕ್ರಮ
ಕೋಲಾರ: ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯಾಚಾರದಂತಹ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಹೆಣ್ಣು ಮಕ್ಕಳು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಗ್ರಾಮಾಂತರ ಠಾಣೆ ಪೊಲೀಸರು ಅರಿವು ಮೂಡಿಸಿದರು. ಗ್ರಾಮಾಂತರ ಠಾಣೆ ಸಹಾಯಕ ಸಬ್‌ಇನ್ಸ್ ಪೆಕ್ಟರ್ ವರಲಕ್ಷ್ಮಿ, ಶಾಲೆಗಳಿಗೆ ಬರುವ ಹೆಣ್ಣು ಮಕ್ಕಳು ಪ್ರೀತಿ,ಪ್ರೇಮದ ಬಲೆಯೊಳಗೆ ಸಿಲುಕಬಾರದು, ಅಪರಿಚಿತರಾಗಲಿ ಯಾರೇ ಆಗಲಿ ನಿಮ್ಮೊಂದಿಗೆ ಅಸಭ್ಯ ವರ್ತನೆ ತೋರಿದಲ್ಲಿ ಅಥವಾ ನಿಮಗೆ ಕಿರುಕುಳ ನೀಡಿದಲ್ಲಿ ಕೂಡಲೇ ಪೊಲೀಸ್ ಠಾಣೆ, ಪೋಷಕರಿಗೆ ಅಥವಾ ಶಿಕ್ಷಕರಿಗೆ ಮಾಹಿತಿ ನೀಡಬೇಕು ಎಂದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com