ಕೋಲಾರ: ಜಿಲ್ಲೆಯ ಬಂಗಾರಪೇಟೆ ಮತ್ತು ಮಾಲೂರು ತಾಲೂಕಿನ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆಗಳು ಕಾಣಿಸಿಕೊಂಡಿದ್ದು, ರೈತರು ಯಾವುದೇ ಕಾರಣಕ್ಕೂ ರಾತ್ರಿ ವೇಳೆ ತಮ್ಮ ಹೊಲ-ಗದ್ದೆಗಳಲ್ಲಿ ಮಲಗಬಾರದೆಂದು ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಣ್ಣ ಮನವಿ ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಿ, ಆನೆಗಳ ಹಾವಳಿ ಹಾಗೂ ರೈತರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಮೇಲೆ ಬೆಳಕು ಚೆಲ್ಲಿದರು.
40 ಆನೆಗಳು ಮರಿಗಳೊಂದಿಗೆ ಬಂಗಾರಪೇಟೆ ಮತ್ತು ಮಾಲೂರು ಗಡಿ ಭಾಗದ ಗ್ರಾಮಗಳಲ್ಲಿ ಕಾಣಿಸಿಕೊಂಡಿವೆ. ಆನೆಗಳು ಎರಡು ಗುಂಪುಗಳಾಗಿದ್ದು, ಆಹಾರ ಮತ್ತು ನೀರಿಗಾಗಿ ಅಲೆದಾಡುತ್ತಿವೆ. ಕಾಡಿನ ಪೋದೆಗಳು ಮತ್ತು ಹೊಲ-ಗದ್ದೆಗಳಲ್ಲಿ ಅಡಗಿಕೊಂಡಿರುವುದರಿಂದ ಅವುಗಳನ್ನು ಹಿಡಿಯಲು ಇಲ್ಲವೇ ಗಡಿಯಿಂದ ಆಚೆಗೆ ಓಡಿಸಲು ಕಷ್ಟವಾಗುತ್ತದೆ. ಆನೆಗಳು ಬೆಳೆಗಳನ್ನು ನಷ್ಟ ಮಾಡಿದಲ್ಲಿ ಪರಿಹಾರ ನೀಡುವುದಕ್ಕೆ ಅರಣ್ಯ ಇಲಾಖೆಯಲ್ಲಿ ಅವಕಾಶ ಉಂಟು. ರೈತರು ಬೆಳೆ ರಕ್ಷಣೆಗಾಗಿ ರಾತ್ರಿ ವೇಳೆ ಹೊಲ-ಗದ್ದೆಗಳಲ್ಲಿ ಮಲಗಿ ಪ್ರಾಣ ಕಳೆದುಕೊಂಡರೆ ಮತ್ತೆ ಜೀವ ಉಳಿಸಲು ಆಗುವುದಿಲ್ಲ. ಆನೆಗಳನ್ನು ಓಡಿಸಲು ಅರಣ್ಯ ಇಲಾಖೆಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಜನತೆಯ ಸಹಕಾರ ಬೇಕು. ಆನೆಗಳು ಕಂಡು ಬಂದಲ್ಲಿ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲವೇ ಅರಣ್ಯ ಪಾಲಕರಿಗೆ ಮಾಹಿತಿ ನೀಡಬೇಕು.
ಯಾವುದೇ ಕಾರಣಕ್ಕೂ ಆನೆಗಳನ್ನು ಓಡಿಸಲು ಗ್ರಾಮಸ್ಥರು ಪ್ರಯತ್ನಿಸಬಾರದು. ಬೆಳೆಗಳು ಹೋದರೂ ಸರಿ ಆನೆಗಳ ತಂಟೆಗೆ ಮಾತ್ರ ಹೋಗಬೇಡಿ ಎಂದು ರೈತರಿಗೆ ಕರೆ ನೀಡುವಂತೆ ಜಿಪಂ ಪ್ರಭಾರ ಅಧ್ಯಕ್ಷರನ್ನು ಕೋರಿದರು.
ಅರಣ್ಯ ಇಲಾಖೆಯಿಂದ ಗಡಿ ಪ್ರದೇಶದಲ್ಲಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಅದೇ ರೀತಿ ಆನೆಗಳು ತಂಗಿರುವ ಗ್ರಾಮಗಳ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ಮೂಲಕ ಜಾಗೃತಿ ಮೂಡಿಸಬೇಕೆಂದು ಅಧ್ಯಕ್ಷರನ್ನು ಕೋರಿದರು. ಎ.ಸಿ.ಎಫ್ ಪುಟ್ಟಣ್ಣನವರ ಮನವಿ ಅಲಿಸಿದ ಪ್ರಭಾರ ಅಧ್ಯಕ್ಷ ನಾಗರಾಜ್, ಎಲ್ಲಾ ಗ್ರಾಪಂ ಪಿಡಿಓಗಳು ಕೂಡಲೇ ರೈತರಿಗೆ ಅರಿವು ಮೂಡಿಸಲು ಮುಂದಾಗಬೇಕು. ಕರಪತ್ರ ಇನ್ನಿತರ ಪ್ರಚಾರ ಸಾಮಾಗ್ರಿಗಳನ್ನು ಬಳಸಿ ಹಳ್ಳಿಗಳಿಗೆ ಆನೆಗಳು ನುಗ್ಗದಂತೆ, ರೈತರು ಆನೆಗಳ ಬಳಿ ಹೋಗದಂತೆ ಎಚ್ಚರವಹಿಸಬೇಕೆಂದು ಸೂಚಿಸಿದರು. ಬಂಗಾರಪೇಟೆ ಮತ್ತು ಮಾಲೂರಿನ ತಾಪಂ ಇಒಗಳು ಪಿಡಿಗಳಿಗೆ ಈ ಸಂಬಂಧ ಸರಿಯಾದ ಸಲಹೆ ನೀಡುವಂತೆ ತಾವು ಸೂಚಿಸುವುದು ಒಳ್ಳೆಯದೆಂದು ಜಿಪಂ ಸಿಒ ವಿನೋತ್ ಪ್ರಿಯಾ ಅವರಿಗೆ ತಿಳಿಸಿದರು.
ಆನೆಗಳ ನಿಯಂತ್ರಣ ಹಾಗೂ ಅವುಗಳ ಸಂರಕ್ಷಣೆಗಾಗಿ ಏನಾದರೂ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಮೋಲ್ ಮೋಹನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಆನಂದ್ ಕೇಳಿದಾಗ,ಆನೆಗಳಿಗಾಗಿಯೇ ಆಭಿಯಾರಣ್ಯ ರಚನೆಗಾಗಿ ಸರ್ಕಾರಕ್ಕೆ ಅರಣ್ಯ ಇಲಾಖೆ ಇಲಾಖೆಯ ವತಿಯಿಂದ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.