ಕೋಲಾರ: ಪ್ಲಾಸ್ಟಿಕ್ ನಿಷೇಧಕ್ಕೆ ನಗರಸಭೆ ಕಾರ್ಯಾಚರಣೆ ಮುಂದುವರೆಸಿದೆ.
ಕಳೆದ 23 ದಿನಗಳಲ್ಲಿ ಪ್ಲಾಸ್ಟಿಕ್ ನಿಷೇಧ ಶೇ.60ರಷ್ಟು ಪ್ರಗತಿ ಸಾಧಿಸಿದ್ದು ಪ್ಲಾಸ್ಟಿಕ್ ಮಾರಾಟಗಾರರಿಂದ ಹಾಗೂ ಬಳಕೆದಾರರಿಂದ 20 ಸಾವಿರಕ್ಕೂ ಅಧಿಕ ದಂಡ ವಸೂಲಿ ಮಾಡಲಾಗಿದೆ.
ಜನತೆಯಲ್ಲಿ ನಗರದ ಸ್ವಚ್ಛತೆ ವಿಚಾರದಲ್ಲಿ ಬದ್ಧತೆ ಇದ್ದಲ್ಲಿ ಇನ್ನೊಂದು ವಾರದಲ್ಲೇ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಮಾಡಬಹುದೆಂದು ನಗರಸಭೆ ಅಧ್ಯಕ್ಷ ಬಿ.ಎಂ. ಮುಬಾರಕ್ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.
ಜು.1ರಿಂದ ನಗರದಲ್ಲಿ ಪ್ಲಾಸ್ಟಿಕ್ ನಿಷೇದ ಜಾರಿಯಲ್ಲಿದ್ದು. ಸಾಕಷ್ಟು ಅವಕಾಶ ನೀಡಿದ ಮೇಲೆ ನಗರಸಭೆ ನಿಯಮ ಪಾಲಿಸದವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದೆ.
ನಗರವನ್ನು ಕಸ ಮುಕ್ತಗೊಳಿಸುವ ನಗರಸಭೆಯ ಆಶಯಕ್ಕೆ ಶೇ. 90ರಷ್ಟು ಮಂದಿ ಬೆಂಬಲ ವ್ಯಕ್ತಪಡಿಸಿದ್ದರೆ ಶೇ.10ರಷ್ಟು ಮಂದಿ ಮಾತ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಾಲ ಕ್ರಮೇಣ ಈ ಜನರು ಸಹ ಸ್ವಚ್ಛತಾ ಆಂದೋನಲಕ್ಕೆ ಕೈಜೋಡಿಸುವ ವಿಶ್ವಾಸವಿದೆ ಎಂದು ಅಧ್ಯಕ್ಷರು ನುಡಿದ್ದಾರೆ.
ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್, ಪ್ರಾವಿಜನ್ ಸ್ಟೋರ್, ಬಟ್ಟೆ ಅಂಗಡಿ ಹಾಗೂ ಪ್ಲಾಸ್ಟಿಕ್ ಮಾರಾಟದ ಮಳಿಗೆಗಳ ಮೇಲೆ ದಾಳಿ ಮಾಡಲಾಗಿದೆ. ಹಳೆ ದಾಸ್ತಾನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಗರಸಭೆಯ ಎಲ್ಲಾ ಸದಸ್ಯರು ಸಹ ಪ್ಲಾಸ್ಟಿಕ್ ನಿಷೇಧಕ್ಕೆ ಮತ್ತು ಕಸ ಮುಕ್ತ ಕೋಲಾರಕ್ಕಾಗಿ ಸಹಕಾರ ನೀಡುತ್ತಿದ್ದು ಒಂದು ವೇಳೆ ಯಾರಾದರೂ ಕದ್ದುಮುಚ್ಚಿ ಪ್ಲಾಸ್ಟಿಕ್ ಮಾರಾಟ ಮಾಡಿದಲ್ಲಿ ಇಲ್ಲವೇ ಪ್ಲಾಸ್ಟಿಕ್ ಚೀಲ, ಪೇಪರ್ ಇತ್ಯಾದಿ ವಸ್ತುಗಳನ್ನು ರಸ್ತೆ, ಗಲ್ಲಿಗೆ ಎಸೆದಲ್ಲಿ ಅಂಥವರನ್ನು ಪತ್ತೆ ಮಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲು ಚಿಂತನೆ ನಡೆದಿದೆ ಎಂದು ಅಧ್ಯಕ್ಷ ಮುಬಾರಕ್ ಎಚ್ಚರಿಕೆ ನೀಡಿದ್ದಾರೆ.
ಪ್ಲಾಸ್ಟಿಕ್ ನಿಷೇಧ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲು ಮಾಡಿದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಒಂದು ತಿಂಗಳ ಕಾಲ ಜೈಲಿಗೆ ಕಳುಹಿಸುವುದಕ್ಕೆ ಕೆಳ ಹಂತದ ನ್ಯಾಯಾಲಯಗಳಿಗೆ ಅಧಿಕಾರ ಇರುವುದರಿಂದ ಸಾರ್ವಜನಿಕರು ಜಾಗೃತರಾಗಬೇಕೆಂದು ಮನವಿ ಮಾಡಿದ್ದಾರೆ.
ಬ್ಯಾಂಕಿಗೆ ದಂಡ: ಪ್ಲಾಸ್ಟಿಕ್ ನಿಷೇಧ ಉಲ್ಲಂಘಿಸಿ ತ್ಯಾಜ್ಯಗಳನ್ನು ಎಸೆದಿದ್ದ ನಗರದ ಕರ್ಣಾಟಕ ಬ್ಯಾಂಕಿಗೆ 5 ಸಾವಿರ ರು. ದಂಡ ವಿಧಿಸಲಾಗಿದೆ. ಕಾನೂನು ಎಲ್ಲರಿಗೂ ಒಂದೇ. ಇನ್ನು ಮುಂದೆ ಬೇರೆಯವರು ಈ ರೀತಿ ಮಾಡಬಾರದೆಂದು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಪ್ಲಾಸ್ಟಿಕ್ ಮಾರಾಟ ಮಾಡುವುದು ಹೇಗೆ ತಪ್ಪೋ ಅದೇ ರೀತಿ ಪ್ಲಾಸ್ಟಿಕ್ ಬಳಕೆ ಮಾಡುವುದು ಸಹ ನಿಯಮ ಬಾಹಿರವೆಂದು ಪರಿಗಣಿಸಲಾಗಿದೆ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.