ಮಾಲೂರು: ಇಲ್ಲಿನ ಶ್ರೀ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ 16 ನೇ ವರ್ಷದ ಕಾವಡಿ ಮಹೋತ್ಸವದ ಅಂಗವಾಗಿ ಭಕ್ತಿ ಪರಾಕಾಷ್ಠೆಯ ಕ್ರೇನ್ ಊಂಜಲ್ ಸೇವೆ ನಡೆಯಿತು.
ಬೆಳಿಗ್ಗೆ ಸ್ವಾಮಿಗೆ ಪಂಚಾಮೃತ ಅಬಿಷೇಕ, ಮಹಾಮಂಗಳಾರತಿ ನಡೆಯಿತು. ಸಂಜೆ ಮೇಡಹಟ್ಟಿ ಗ್ರಾಮಸ್ಥರು ಹಾಗೂ ಹನುಮಂತನಗರದ ಭಕ್ತ ಸಮೂಹದ ಕಾವಡಿ ಉತ್ಸವ ಸಾಂಪ್ರದಾಯಿಕ ವಾದ್ಯಗಳೂಂದಿಗೆ ನಗರ ಪ್ರದಕ್ಷಣೆ ನಡೆಯಿತು. ನಂತರ ದೇವಾಲಯದ ಮುಂಭಾಗ ಭಕ್ತಿ ಪರಾಕಾಷ್ಠೆಯ ಕ್ರೇನ್ ಊಂಜಲ್ ಮತ್ತು ಊಂಜಲ್ ಸೇವೆ ನಡೆಯಿತು. ಹರಕೆ ಹೊತ್ತ ಭಕ್ತಾಧಿಗಳು ತಮ್ಮ ಮೈಗೆ ಸೂಜಿ, ಕೊಕ್ಕೆ ಸಿಕ್ಕಿಸಿಕೊಂಡು ಕ್ರೇನ್ ನಲ್ಲಿ ನೇತಾಡುವ ಹಾಗೂ ಬೆನ್ನಿಗೆ ಕೊಕ್ಕೆ ಸಿಕ್ಕಿಸಿಕೊಂಡು ರಸ್ತೆಯ ಒಂದು ಬದಿಯಿಂದ ದೇವಾಲಯದ ವರೆಗೆ ಸಾಗಿ ಸ್ವಾಮಿ ಪೋಟೋಗೆ ಪೊಜೆ ಸಲ್ಲಿಸಿ ಮತ್ತೇ ವಾಪಸಾಗುವ ದೃಶ್ಯಗಳು ಮೈನವಿರೇಳಿಸುವಂತಿತ್ತು. ಸಾವಿರಾರು ಭಕ್ತರು ಈ ಶ್ರದ್ಧಾ ಭಕ್ತಿಯ ಪವಾಡ ಸದೃಶ ದೇವತಾ ಕಾರ್ಯಕ್ರಮವನ್ನು ವೀಕ್ಷಿಸಿದರು.ನಾಲ್ಕು ಗಂಟೆಗಳ ಕಾಲಕ್ಕೂ ಹೆಚ್ಚು ಕಾಲ ನಡೆದ ಈ ಧಾರ್ಮಿಕ ಕಾರ್ಯದಿಂದಾಗಿ ಕೋಲಾರ-ಹೂಸೂರು ಜೋಡಿ ರಸ್ತೆಯ ಸಂಚಾರದ ಮಾರ್ಗವನ್ನು ಬದಲಾಯಿಸಲಾಗಿತ್ತು. ಸ್ಥಳೀಯ ಪೊಲೀಸರು ಎಸ್ಐ ದಯಾನಂದ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತು ವ್ಯವಸ್ಥೆ ಮಾಡಿದ್ದರು.