ಮುಳಬಾಗಲು: ಕೋಲಾರ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮೇಲೆ ಮತ್ತು ಮಹಿಳೆಯರ ಮೇಲೆ ಸರಣಿ ಅತ್ಯಾಚಾರಗಳು ನಡೆಯುತ್ತಿದ್ದು, ದೌರ್ಜನ್ಯ, ಕೊಲೆ ಪ್ರಕರಣಗಳು ಹೆಚ್ಚಾಗಿವೆ. ಒಂದು ವಾರದಲ್ಲಿ 11 ಅತ್ಯಾಚಾರ ಮಾನಭಂಗ ಪ್ರಕರಣಗಳು ನಡೆದಿವೆ. ಜಿಲ್ಲಾಡಳಿತ ಮತ್ತು ಪೊಲೀಸರು ತುರ್ತು ಕ್ರಮ ತೆಗೆದುಕೊಂಡು ಆರೋಪಿಗಳನ್ನು ಕಠಿಣವಾಗಿ ಶಿಕ್ಷಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ಇದರೊಂದಿಗೆ ಮುಳಬಾಗಲು ಬಂದ್ ಯಶಸ್ವಿಯಾಯಿತು. ಪಟ್ಟಣದಲ್ಲಿ ಅಂಗಡಿ ಸ್ವಯಂಪ್ರೇರಿತರಾಗಿ ಮುಚ್ಚಿದ್ದರು. ಸರ್ಕಾರಿ ಮತ್ತು ಖಾಸಗಿ ವಾಹನಗಳು ರಸ್ತೆಗೆ ಇಳಿದಿರಲಿಲ್ಲ. ಕೋರ್ಟ್ ಮತ್ತು ಸರ್ಕಾರಿ ಕಚೇರಿಗಳ ಬಳಿ ಜನರು ಕೂಡಾ ಇರಲಿಲ್ಲ. ಟೆಎಪಿಸಿಎಂಎಸ್ ಬಳಿ ನಡೆದ ಪ್ರತಿಭಟನೆಯಲ್ಲಿ ರೈತಸೇನೆ ಮುಖಂಡ ಜೆಮಿನಿ ರಮೇಶ್, ದಲಿತ ಮುಖಂಡ ವಿಜಯಕುಮಾರ್, ಜಯಣ್ಣ, ಕೃಷ್ಣಾರೆಡ್ಡಿ, ಮುನಿವೆಂಕಟಪ್ಪ ಮುಂತಾದವರು ಭಾಗವಹಿಸಿದ್ದಾರೆ.
ಭುವನೇಶ್ವರಿಗೇ ಮನವಿ!
ಟೇಕಲ್: ರಾಜ್ಯ ಮತ್ತು ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರವನ್ನು ಖಂಡಿಸಿ ಟೇಕಲ್ನಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಅತ್ಯಾಚಾರ ತಡೆಯುವಂತೆ ಮತ್ತು ಆರೋಪಿಗಳಿಗೆ ಶಿಕ್ಷಿಸುವಂತೆ ಪ್ರಾರ್ಥನೆ ಸಲ್ಲಿಸಲಾಯಿತು. ಕರವೇ ಮುಖಂಡ ಉಳ್ಳೇರಹಳ್ಳಿ ಮಂಜುನಾಥಗೌಡ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಅತ್ಯಾಚಾರಗಳನ್ನು ತಡೆಯಲು ವಿಶೇಷ ಕಾನೂನನ್ನು ರಚಿಸಬೇಕೆಂದು ಆಗ್ರಹಿಸಿದರು. ಕರವೇ ಟೇಕಲ್ ಶಾಖೆಯ ಬನಹಳ್ಳಿ ಮಂಜುನಾಥಗೌಡ, ಉಳ್ಳೇರಹಳ್ಳಿ ವೆಂಕಟೇಶ್, ಗೋವರ್ಧನ್, ಬಿ.ಜಿ.ಸತೀಶ್ಗೌಡ, ಎಸ್.ಜಿ.ರಾಮಮೂರ್ತಿ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
ಮಾಲೂರು ನೀರಸ
ಮಾಲೂರು: ಸರಣಿ ಅತ್ಯಾಚಾರ ಖಂಡಿಸಿ ವಿವಿಧ ಸಂಘಟನೆಗಳು ಕರೆ ನೀಡಿದ ಜಿಲ್ಲಾ ಬಂದ್ಗೆ ಮಾಲೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕರವೇ ಹಾಗೂ ಪ್ರಗತಿ ಪರ ಸಂಘಟನೆಯ ಪರವಾಗಿ ಪ್ರತಿಭಟನೆ ಮೆರವಣಿಗೆಯಿಂದ ರಸ್ತೆ ಸಂಚಾರ ಅರ್ಧ ಗಂಟೆ ಅಡಚಣೆಯಾಗಿರುವುದು ಬಿಟ್ಟರೆ ಇಡೀ ಪಟ್ಟಣ ಎಂದಿನಂತೆ ಸಹಜ ಸ್ಥಿತಿಯಲ್ಲಿ ನಡೆದವು. ಎಲ್ಲ ಶಾಲಾ-ಕಾಲೇಜುಗಳು ಮುಚ್ಚಿದ್ದವು. ಜಿಲ್ಲೆ ಬಂದ್ ನಡೆಯುತ್ತಿರುವುದರಿಂದ ಜಿಲ್ಲೆಯ ತಾಲೂಕುಗಳಿಂದ ಬರುವ ಸರ್ಕಾರಿ ಬಸ್ಗಳ ಸಂಖ್ಯೆ ಕಡಿಮೆಯಾಗಿತ್ತು. ಕರವೇ ಕಾರ್ಯಕರ್ತರು ಹಾಗೂ ಪ್ರಗತಿ ಪರ ಜನಪರ ಸಂಘಟನೆಗಳ ಪರವಾಗಿ ಇಲ್ಲಿನ ಎಸ್ಎಫ್ಐ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನೆಡೆಸಿದರು.
ಕಾರ್ಯಕರ್ತರು ಪಟ್ಟಣದ ಜೋಡಿ ರಸ್ತೆಯಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ, ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಸಂಪಂಗಿ ಹಾಗೂ ಗೋಪಿ ನೇತೃತ್ವದ ಪ್ರಗತಿ ಪರಜನಪರ ಸಂಘಟನೆಯ ಕಾರ್ಯಕರ್ತರು ಮಿನಿವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಅತ್ಯಾಚಾರಗಳನ್ನು ತಡೆಯಲು ಸೂಕ್ಕ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಬಂದ್ ಸಂಪೂರ್ಣ
ಬಂಗಾರಪೇಟೆ: ಅತ್ಯಾಚಾರ ಪ್ರಕರಣಗಳು ಹೆಚ್ಚಳವಾಗುತ್ತಿದ್ದರೂ ನಿಯಂತ್ರಿಸಬೇಕಾದ ಸರ್ಕಾರ ನಿದ್ದೆ ಮಾಡುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳ ಬಂಗಾರಪೇಟೆ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಪ್ರಗತಿ ಪರ ಸಂಘಟನೆಗಳು ಸ್ವಯಂಪ್ರೇರಿತ ಬಂಗಾರಪೇಟೆ ಬಂದ್ ಕರೆ ನೀಡಿದ್ದರು. ಯಾವುದೇ ಅಹಿತಕರ ಘಟನೆಗಳು ಇಲ್ಲದೆ ಬಂದ್ ಶಾಂತಿಯುತವಾಗಿ ನಡೆಯಿತು. ಬೆಳಗ್ಗೆಯಿಂದಲೇ ಸಾರಿಗೆ ಬಸ್ಗಳು, ಆಟೋಗಳು, ಟೆಂಪೋಗಳು ರಸ್ತೆಗೆ ಇಳಿಯಲಿಲ್ಲ. ಚಿತ್ರಮಂದಿಗಳು ಮುಚ್ಚಿದ್ದವು. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಉಳಿದ ಬ್ಯಾಂಕುಗಳು, ವ್ಯಾಪಾರ ಚಟುವಟಿಕೆಗಳು ಬಂದ್ ಆಗಿದ್ದವು. ಬೆಳಗ್ಗೆ ದಲಿತ ಸಮಾಜ ಸೇನೆ, ಕರವೇ, ರೈತರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.