152 ನಕಲಿ ವೈದ್ಯರ ಕ್ಲಿನಿಕ್ ಬಂದ್

Updated on: 

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 152 ನಕಲಿ ವೈದ್ಯರನ್ನು ಗುರುತಿಸಿ ಅವರ ಕ್ಲಿನಿಕ್ಗಳನ್ನು ಮುಚ್ಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ವಿ. ರಂಗಸ್ವಾಮಿ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನೋಂದಣಿ ಇಲ್ಲದೆ 152 ಚಿಕಿತ್ಸಾಲಯಗಳು ಅನಧಿಕೃತವಾಗಿ ನಡೆಯುತ್ತಿರುವುದನ್ನು ಜಿಲ್ಲಾ ಪರಿಶೀಲನಾ ಸಮಿತಿಯ ನೆರವಿನೊಂದಿಗೆ ಪರಿಶೀಲಿಸಿ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ನಂತರ ಖಾಸಗಿ ವೈದ್ಯರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕೆಂಬ ಸೂಚನೆ ನೀಡಿದ್ದು ಅದರಂತೆ 185 ಆರ್ಎಂಪಿ ವೈದ್ಯರು  ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 33 ಅರ್ಜಿ ಅನುಮೋದಿಸಿ ಉಳಿದ 152 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅಲ್ಲದೇ ಇವರಿಗೆ ಚಿಕಿತ್ಸೆ ನೀಡದಂತೆ ಎಚ್ಚರಿಕೆ ಕೊಡಲಾಗಿದೆ ಎಂದರು.
ನಕಲಿ ವೈದ್ಯರು ಸ್ಟೆರಾಯಿಡ್ಅನ್ನು ಬಳಕೆ ಮಾಡಿ ತಲೆನೋವು, ಜ್ವರ ಸೇರಿದಂತೆ ಸಣ್ಣ ಸಣ್ಣ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಾರೆ. ಇದು ಅಪಾಯಕಾರಿ. ನೋವು ತಾತ್ಕಾಲಿಕವಾಗಿ ಶಮನವಾದರೂ ಕಾಯಿಲೆ ವಾಸಿಯಾಗುವುದಿಲ್ಲ. ಅಲ್ಲದೇ ಸ್ಟೆರಾಯಿಡ್ನ ಹೆಚ್ಚಿನ ಬಳಕೆಯಿಂದ ಹೃದಯ, ಕಿಡ್ನಿ ಸಂಬಂಧಿತ ಕಾಯಿಲೆಗಳು ಬರುತ್ತವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ನಕಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯಬಾರದು. ಇಲಾಖೆ ಸಹ ಈ ಬಗ್ಗೆ ಜಾಗೃತಿ ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಕೆಪಿಎಂಬಿ ಕಾಯಿದೆಯನ್ವಯ ಚಿಕಿತ್ಸಾಲಯಗಳನ್ನು ನಡೆಸಲು ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲಿ ನೋಂದಾಯಿಸುವುದು ಕಡ್ಡಾಯ. ಯಾವ ರಾಜ್ಯದಲ್ಲಿ ತರಬೇತಿಯನ್ನು ಪಡೆಯಲಾಗಿರುತ್ತದೆಯೋ ಅಲ್ಲಿಯೇ ನೋಂದಾಯಿಸಿ ಅದರ ವ್ಯಾಪ್ತಿಯಲ್ಲಿ ಚಿಕಿತ್ಸೆ ಪಡೆಯಬೇಕು. ಆದರೆ, ಬೇರೆಲ್ಲೋ ಪ್ರಮಾಣ ಪತ್ರವನ್ನು ಪಡೆದುಕೊಂಡು ಬಂದು ಇಲ್ಲಿ ಚಿಕಿತ್ಸೆ ನೀಡುವುದು ಅಪರಾಧವಾಗಿದೆ ಎಂದರು.
ಈಗಾಗಲೇ ಅನೇಕ ನಕಲಿ ವೈದ್ಯರು ತಮ್ಮ ಚಿಕಿತ್ಸಾಲಯ ಮುಚ್ಚಿದೆ. ಇದರ ನಡುವೆ ಕೆಲವರು ಕದ್ದು ಮುಚ್ಚಿ ಚಿಕಿತ್ಸಾಲಯಗಳನ್ನು ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅನಿರೀಕ್ಷಿತ ದಾಳಿ ನಡೆಸಿ ಪರಿಶೀಲಿಸಲಾಗುವುದು.
 ಒಂದು ವೇಳೆ ಸಿಕ್ಕಿ ಬಿದ್ದಲ್ಲಿ ಜೈಲಿಗೆ ಕಳುಹಿಸಲಾಗುತ್ತಿದೆ. ಕಾನೂನು ಪ್ರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಭಾರತೀಯ ವೈದ್ಯಕೀಯ ಮಂಡಳಿಯ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ. ಮಂಜುನಾಥ್ ಮಾತನಾಡಿ, ಕರ್ನಾಟಕದಲ್ಲಿ ಖಾಸಗಿ ಚಿಕಿತ್ಸಾಲಯ, ಆಸ್ಪತ್ರೆಗಳನ್ನು ನಡೆಸಲು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ವೈದ್ಯಕೀಯ ಪದವಿ ಹೊಂದಿದಾಗ್ಯೂ ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸದಿದ್ದಲ್ಲಿ ಅಂತಹ ವೈದ್ಯಕೀಯ ಪದವೀಧರರು ಖಾಸಗಿ ಚಿಕಿತ್ಸಾಲಯ ನಡೆಸಲು ಅರ್ಹತೆ ಹೊಂದಿರುವುದಿಲ್ಲವೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಉಪ ನಿರ್ದೇಶಕಿ ಡಾ. ಉಷಾ ಅಣ್ಣಾಪುರೆ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸನಾವುಲ್ಲಾ, ಜಿಲ್ಲಾ ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ಡಾ. ಅನಿಲ್ ಕುಮಾರ್  ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com