ಕೆಜಿಎಫ್: ಆಷಾಢ ಮಾಸದ(ತಮಿಳರ) ಪ್ರಯುಕ್ತ ನಗರದ ಎಂಜಿ ಮಾರುಕಟ್ಟೆಯ ಅರುಳ್ಮಿಗು ಶ್ರೀ ದೇವಿ ಕರುಮಾರಿಯಮ್ಮ ದೇವಾಲಯದ 20ನೇ ವರ್ಷದ ಆಷಾಢ ಜಾತ್ರಾ ಮಹೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ನಗರದ ವಿವಿಧ ಬಡಾವಣೆಗಳಿಂದ ಸಾವಿರಾರು ಮಹಿಳಾ ಭಕ್ತಾಧಿಗಳು 1008 ಹಾಲು ಕೊಡಗಳನ್ನು ತಲೆ ಮೇಲೆ ಹೊತ್ತು ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಿಂದ ಉತ್ಸವ ಪಲ್ಲಕಿಯೊಂದಿಗೆ ಮೆರವಣಿಗೆಯಲ್ಲಿ ತೆರಳಿದರು. ಗೀತಾರಸ್ತೆ, ಸೂರಜ್ಮುಲ್ ವೃತ್ತ, ಗಾಂಧಿ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಎಂಜಿ ಮಾರುಕಟ್ಟೆ ಶ್ರೀ ದೇವಿ ಕರುಮಾರಿಯಮ್ಮ ದೇವಸ್ಥಾನ ತಲುಪಿ ಅಮ್ಮನಿಗೆ 1008 ಹಾಲು ಕೊಡ ಅಭಿಷೇಕ ಮಡಿದರು.ಕೆಜಿಎಫ್ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶಗಳು ಸೇರಿದಂತೆ ಕೋಲಾರ ಜಿಲ್ಲೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ, ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಂದ ಸಾವಿರಾರು ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸಿ ಪೂಜೆಯನ್ನು ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾದರು. ಪೂಜೆಯಲ್ಲಿ ತಮಿಳುನಾಡಿನ ಚೆನ್ನೈನ ಮಡಿಪಾಕಂ ಬ್ರಹ್ಮ ಶಕ್ತಿ ದೇವಸ್ಥಾನ ಬಾಲಪೀಠಂನ ಶ್ರೀ ಬಾಲಾ ಅಮ್ಮನ್ ಅವರು ಸೇರಿದಂತೆ ಕ್ಷೇತ್ರದ ಮಾಜಿ ಶಾಸಕರಾದ ವೈ.ಸಂಪಂಗಿ, ಎಂ.ಭಕ್ತವತ್ಸಲಂ, ಎಸ್.ರಾಜೇಂದ್ರನ್, ನಗರಸಭಾ ಸದಸ್ಯರು, ವಿವಿಧ ರಾಜಕೀಯ ಹಾಗೂ ಸಂಘ ಸಂಸ್ಥೆಗಳ ಮುಖಂಡರುಗಳು, ಎಂಜಿ ಮಾರುಕಟ್ಟೆ ವ್ಯಾಪಾರ ಸಂಘ ಮತ್ತಿತರರು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.