ಚಿಂತಾಮಣಿ: ಪೊಲೀಸ್ ಮೂಲಕವೇ ನಡೆಯುತ್ತಿರುವ ಮರಳು ದಂಧೆಗೆ ಕಡಿವಾಣ ಹಾಕಲು ಅಮರ್ಪಕ ಜಿಲ್ಲಾಧಿಕಾರಿ ಡಾ.ವಿಶಾಲ್ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯಕರ್ತರು ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಮುತ್ತಿಗೆ ಹಾಕಿದರು.
ನಗರದ ನಗರಸಭೆ ಸಭಾಂಗಣದಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಮುಗಿಸಿಕೊಂಡು ಹೊರ ಬರುತ್ತಿದ್ದಂತೆ ಗೇಟ್ ಮುಂಭಾಗದಲ್ಲೇ ಮುನಿಯಪ್ಪ ಅವರಿಗೆ ಮುತ್ತಿಗೆ ಹಾಕಿ ದಲಿತರ ವಿರೋಧಿ ನೀತಿಯನ್ನು ಅನುಸರಿಸಿ ಹಿಟ್ಲರ್ ಧೋರಣೆ ಅನುಸರಿಸುತ್ತಿರುವ ಜಿಲ್ಲಾಧಿಕಾರಿ ಡಾ.ವಿಶಾಲ್ ಅವರನ್ನು ಎತ್ತಂಗಡಿ ಮಾಡಬೇಕೆಂದು ಆಗ್ರಹಿಸಿದರು.
ಡಿಸಿ ವಿಶಾಲ್ ಅವರು ಸರ್ಕಾರಿ ಭೂಮಿ ರಕ್ಷಣೆ ಮಾಡದೆ ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ಕೋಟ್ಯಂತರ ರು. ಲಂಚ ಪಡೆದು ಬಲಾಢ್ಯರ ಮತ್ತು ಬಂಡವಾಳ ಶಾಹಿಗಳು ಪರ ಕಾನೂನು ಬಾಹಿರವಾಗಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಟ್ಟಿದ್ದಾರೆ. ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಹಾಗೂ ಅಕ್ರಮ ಮರಳು ದಂಧೆಗೆ ಅನುವು ಮಾಡಿಕೊಟ್ಟಿರುವ ಡಿಸಿ ಹಾಗೂ ಜಿಲ್ಲಾ ಉಪ ವಿಭಾಗಾಧಿಕಾರಿಯಾದ ಕೆ.ಟಿ.ಶಾಂತಲಾ ಅವರನ್ನು ವರ್ಗಾಯಿಸುವಂತೆ ಜಿಲ್ಲಾ ಸಮನ್ವಯ ಸಮಿತಿ ಮುಖಂಡ ಜಿ.ನಾರಾಯಣಸ್ವಾಮಿ ಆಗ್ರಹಿಸಿದರು. ಪದಾಧಿಕಾರಿಗಳಾದ ಎನ್.ನಾರಾಯಣಪ್ಪ,ಶ್ರೀನಿವಾಸ್, ಸೀಕಸ್ಮೂರ್ತಿ, ಗೊಲ್ಲಹಳ್ಳಿ ನಾರಾಯಣಸ್ವಾಮಿ,ಕಲ್ಲಹಳ್ಳಿ ಕೃಷ್ಣಮೂರ್ತಿ, ಈಶ್ವರಪ್ಪ, ವೆಂಕಟೇಶ್, ಮಂಜುನಾಥ್, ಎಂ.ಆರ್. ನಾರಾಯಣಸ್ವಾಮಿ, ರಾಮಯ್ಯ ಇತರರು ಇದ್ದರು.