ಬಾಗೇಪಲ್ಲಿ: ರಾಜ್ಯದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಸಿಪಿಎಂ ಕರೆ ನೀಡಿದ್ದ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಿಪಿಎಂ, ಡಿವೈಎಫ್, ಐಎಸ್ಎಫ್ಐ, ಜನವಾದಿ ಮಹಿಳಾ ಸಂಘಟನೆ, ರೈತ ಸಂಘ ಸೇರಿದಂತೆ ವಿವಿಧ ಪ್ರಗತಿ ಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಎಚ್.ಎನ್.ವೃತ್ತ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ, ಪಾತಬಾಗೇಪಲ್ಲಿ ಕ್ರಾಸ್ ವೃತ್ತ, ನ್ಯಾಷನಲ್ ಕಾಲೇಜು ಮುಂಭಾಗ, ಸುಂದರಯ್ಯ ಭವನ ಹಾಗೂ ಟಿ.ಬಿ.ಕ್ರಾಸ್ ಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಆಟೋ, ಟೆಂಪೋ, ಬಸ್ ಸೇರದಂತೆ ಯಾವುದೇ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಇಲ್ಲದೇ ಬಿಕೋ ಎನ್ನುತ್ತಿದ್ದವು. ಜಿಪಂ ಸದಸ್ಯೆ ಬಿ.ಸಾವಿತ್ರಮ್ಮ, ಸಿಪಿಎಂ ಮುಖಂಡ ಪಿ.ಮಂಜುನಾಥರೆಡ್ಡಿ, ಎಂ.ಎನ್.ರಘುರಾಮರೆಡ್ಡಿ, ಮುನಿರತ್ನಮ್ಮ, ಜಬೀವುಲ್ಲಾ, ಬಿ.ಎಚ್ .ಆರೀಫ್, ಮಹಮದ್ ಅಕ್ರಂ, ಜೈನಾಭೀ, ಗೋವರ್ಧನಚಾರಿ, ಎಚ್ .ಎ.ರಾಮಲಿಂಗಪ್ಪ, ಹೇಮಚಂದ್ರ, ಆಂಜನೇಯರೆಡ್ಡಿ, ಮುಸ್ತಾಫ, ವೈ.ಆರ್ .ವೆಂಕಟೇಶ್ ಬಾಬು, ಜಿ.ಕೃಷ್ಣಪ್ಪ, ಅಶ್ವತ್ಥಪ್ಪ, ಚಂದ್ರಶೇಖರರೆಡ್ಡಿ, ಕಂಚುಕೋಟೆಮೂರ್ತಿ ಮತ್ತಿತರರು ಭಾಗವಹಿಸಿದ್ದರು. ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದರು. ಎ.ನಂಜುಂಡ, ದತ್ತಾತ್ರೇಯ, ಜೆ.ಎನ್ .ನಂಜಂಪ್ಪ, ಸುಬ್ಬರೆಡ್ಡಿ, ಬಿ.ಎ.ನರಸಿಂಹಮೂರ್ತಿ, ಮಂಜುಳಾ ಇದ್ದರು.
ಚಿಂತಾಮಣಿ: ಮಿಶ್ರ ಪ್ರತಿಕ್ರಿಯೆ
ಚಿಂತಾಮಣಿ: ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ವಿಫಲವಾಗಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಕರೆದಿದ್ದ ಜಿಲ್ಲಾ ಬಂದ್ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ತಾಲೂಕಿನ ವಿವಿಧ ಸಂಘಟನೆಗಳು ಹಾಗೂ ಸಿಪಿಎಂ ಕಾರ್ಯಕರ್ತರು ಕರೆ ನೀಡಿದ್ದ ಬಂದ್ಗೆ ಸಾರ್ವಜನಿಕರು ಸಹಕರಿಸುವಂತೆ ಕೋರಿ ನಗರದಾದ್ಯಂತ ಬೈಕ್ ರ್ಯಾಲಿ ನಡೆಸಿದರು. ಸಿಪಿಎಂ, ರೈತಸಂಘ, ಕರವೇ, ಕನ್ನಡಸೇನೆ, ವಂದೇ ಮಾತರಂ, ಕನ್ನಡ ಜಾಗೃತಿ ವೇದಿಕೆ, ದಲಿತ ಸಮನ್ವಯ ಸಮಿತಿ ಕಾರ್ಯಕರ್ತರು ಮುಂದಾಳತ್ವ ವಹಿಸಿದ್ದರು. ಗೋಪಿನಾಥ್, ಜಿ.ನಾರಾಯಣಸ್ವಾಮಿ ಇತರರು ಇದ್ದರು.