ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 17
ರೇಷ್ಮೆ ಸೀರೆಗೆ ಮನಸೋಲದ ಹೆಂಗಳೆಯರೇ ಇಲ್ಲ. ಅದರಲ್ಲೂ ನಮ್ಮ ಭಾಗದ ಮೈಸೂರು ಸಿಲ್ಕ್ ಸೀರೆ, ನೀರೆಯರಿಗೆ ಭವ್ಯ ಪಾರಂಪರಿಕ ಉಡುಗೆ ಪ್ರತೀಕ ಎಂದೇ ಭಾವನೆ. ಇತ್ತೀಚೆಗೆ ವಿದೇಶಿಗರಿಗೂ ಸೀರೆಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಜಿಪಂ ಸಿಇಓ ಡಿ.ಕೆ. ರವಿ ಹೇಳಿದರು.
ಗಂಗಾವತಿಯ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.
ಮೈಸೂರು ಸಿಲ್ಕ್ ಸೀರೆಗಳು ವಿದೇಶಗಳಲ್ಲಿ ತನ್ನ ಜನಪ್ರಿಯತೆ ಹೆಚ್ಚಿಸಿಕೊಂಡಿವೆ. ಭಾರತೀಯ ಸಂಸ್ಕೃತಿ, ಸಂಪ್ರದಾಯದಲ್ಲಿ ಸೀರೆಗೆ ಅಗ್ರ ಸ್ಥಾನ ನೀಡಲಾಗಿದೆ. ಭಾರತೀಯ ಮಹಿಳೆಯರಿಗೆ ಸೀರೆ ಎಂದರೆ ಅಚ್ಚು-ಮೆಚ್ಚು, ಮದುವೆ ಮುಂತಾದ ಶುಭ ಕಾರ್ಯಗಳಲ್ಲಿ ರೇಷ್ಮೆ ಸೀರೆ ಉಡುಗೆಗೆ ಅಗ್ರಸ್ಥಾನ. ರೇಷ್ಮೆ ಸೀರೆಯಲ್ಲಿ ಮಹಿಳೆಯರ ಸೌಂದರ್ಯ ಹೆಚ್ಚುತ್ತದೆ ಎನ್ನುವ ದೃಢವಿಶ್ವಾಸವಿದೆ ಎಂದರು.
ರಾಜ್ಯದಲ್ಲಿ ರೇಷ್ಮೆ ಸೀರೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅದೇ ರೀತಿ ರೇಷ್ಮೆ ತಯಾರಿಕೆಯಲ್ಲಿಯೂ ರಾಜ್ಯ ಮುಂದಿದೆ. ಮೈಸೂರು ಸಿಲ್ಕ್ ಸೀರೆ ಸಾಂಪ್ರದಾಯಿಕ ಮತ್ತು ಪಾರಂಪರಿಕ ಉಡುಗೆಯಲ್ಲಿ ಮಹತ್ವದ ಸ್ಥಾನ ಹೊಂದಿದೆ. ಇಂತಹ ಖ್ಯಾತಿ ಹೊಂದಿರುವ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದ್ದು ಸಂತಸ ತಂದಿದೆ ಎಂದರು.
ಕರ್ನಾಟಕ ರೇಷ್ಮೆ ಉದ್ಯಮ ನಿಗಮದ ಮಾರಾಟ ವ್ಯವಸ್ಥಾಪಕ ಫಿಲೋಮೆನ್ ರಾಜ್ ಮಾತನಾಡಿ, ಮೈಸೂರು ಸಿಲ್ಕ್ ಉದ್ದಿಮೆ ಆರಂಭಗೊಂಡು 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಿಗಮವು ಗ್ರಾಹಕರಿಗೆ ಹಲವು ರಿಯಾಯಿತಿಗಳನ್ನು ಕಲ್ಪಿಸಿದೆ. ಸರ್ಕಾರಿ ನೌಕರರಿಗೆ ಯಾವುದೇ ಬಡ್ಡಿ ಇಲ್ಲದೆ, 10 ಸಮ ಕಂತುಗಳಲ್ಲಿ ಹಣ ಪಾವತಿಸುವ ಅವಕಾಶವನ್ನು ಒದಗಿಸಿದೆ. ಅಲ್ಲದೆ ಮೈಸೂರು ಸಿಲ್ಕ್ ಸೀರೆಗಳ ಗುಣಮಟ್ಟ ಹಾಗೂ ಡಿಸೈನಿಂಗ್ ಅನ್ನು ಇನ್ನಷ್ಟು ವೈವಿಧ್ಯಮಯಗೊಳಿಸಿದ್ದು, ಅತ್ಯಂತ ಆಕರ್ಷಕವಾಗಿ ಹೊರತರಲಾಗುತ್ತಿದೆ. ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಉತ್ತಮ ಗುಣಮಟ್ಟದ ರೇಷ್ಮೆ ಸೀರೆಗಳನ್ನು ಖರೀದಿಸಬಯಸಿದಲ್ಲಿ, ನಿಗಮದ ಮಾರಾಟ ಮೇಳಕ್ಕೆ ಬಂದು ಖರೀದಿಸುವಂತೆ ಕೋರಿದರು.
ಗಂಗಾವತಿ ತಹಸೀಲ್ದಾರ್ ಗಂಗಪ್ಪ ಮುಂತಾದವರು ಉಪಸ್ಥಿತರಿದ್ದರು.
Advertisement