ಕೊಪ್ಪಳ: ಜಿಲ್ಲೆ ಮಹತ್ವದ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಪ್ರತಿ ತಾಲೂಕು, ಗ್ರಾಮ ತನ್ನದೇ ಆದ ಇತಿಹಾಸ ಹೊಂದಿದೆ. ಶಿಕ್ಷಕರು ಸ್ಮಾರಕಗಳ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಜಿಪಂ ಸಿಇಒ ಕೃಷ್ಣ ಉದಪುಡಿ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯ ಎಲ್ಲ ಸಿಆರ್‌ಪಿ, ಬಿಆರ್‌ಸಿ, ಸಂಯೋಜಕರು ಹಾಗೂ ದೈಹಿಕ ಶಿಕ್ಷಕರಿಗೆ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಆಯೋಜಿಸಲಾಗಿದ್ದ ಪರಿಸರ ಮತ್ತು ಸ್ಮಾರಕಗಳ ಉಳಿವಿಗೆ ಶೈಕ್ಷಣಿಕ ಅಧ್ಯಯನ ಚಾರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಕರು ಪಠ್ಯಪುಸ್ತಕಗಳಲ್ಲಿನ ವಿಷಯ ಬೋಧಿಸುವ ಜೊತೆಗೆ, ತಿಂಗಳಿಗೊಮ್ಮೆ, ಪ್ರಕೃತಿ ಅಧ್ಯಯನ, ಸ್ಥಳ ಮಹತ್ವ, ಪ್ರವಾಸಿ ತಾಣ, ಐತಿಹಾಸಿಕ ಹಿನ್ನೆಲೆಯ ಸ್ಥಳಕ್ಕೆ ತೆರಳುವ ಮೂಲಕ ವಿದ್ಯಾರ್ಥಿಗಳಿಗೆ ಅದನ್ನು ತಿಳಿಸಬೇಕು ಎಂದರು.
ಇದರಿಂದ ಮಕ್ಕಳಿಗೆ ಇತಿಹಾಸದ ಬಗೆಗೆ ಕಾಳಜಿ ಬರುತ್ತದೆ. ಪರಿಸರ ಬದಲಾವಣೆಯಿಂದ ಮಾನಸಿಕ ಮತ್ತು ಬೌದ್ಧಿಕ ಸದೃಢತೆಗೆ ಸಹಕಾರಿಯಾಗಲಿದೆ. ನಿತ್ಯದ ಜಂಜಾಟದ ನಡುವೆ, ಪ್ರಕೃತಿಯ ಸೊಬಗನಲ್ಲಿ ವಿದ್ಯಾರ್ಥಿಗಳೊಡನೆ ವಿಹರಿಸಿ, ಅಡಗಿರುವ ವಿಷಯ, ಸಸ್ಯ ಪ್ರಭೇದ, ಐತಿಹಾಸಿಕ ಮಹತ್ವಗಳ ಕುರಿತು ವಿದ್ಯಾರ್ಥಿಗಳಿಗೆ ಉಣಬಡಿಸಿ ಎಂದರು.
ಡಿಡಿಪಿಐ ಜಿ.ಎಚ್. ವೀರಣ್ಣ ಮಾತನಾಡಿ, ಜಿಲ್ಲೆ ಅಶೋಕ ಚಕ್ರವರ್ತಿ, ವಿಜಯನಗರ ಸಾಮ್ರಾಜ್ಯ ಸೇರಿದಂತೆ ಮಹತ್ವದ ಇತಿಹಾಸವನ್ನು ಹೊಂದಿದೆ. ಕೊಪ್ಪಳ ನಗರದಲ್ಲಿಯೇ ಅಶೋಕನ ಶಿಲಾಶಾಸನ, ಕೊಪ್ಪಳದ ಕೋಟೆ ಮುಂತಾದ ಮಹತ್ವದ ಐತಿಹಾಸಿಕ ತಾಣ ಹೊಂದಿವೆ. ಇನ್ನು ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸ್ಥಳಗಳಿವೆ.
ಶಿಕ್ಷಕರು, ತಮ್ಮ ಪ್ರದೇಶ ವ್ಯಾಪ್ತಿಯ ಮಹತ್ವದ ಸ್ಥಳಕ್ಕೆ ಹೊರ ಸಂಚಾರದಂತ ಕಾರ್ಯಕ್ರಮ ಏರ್ಪಡಿಸಿ ವಿದ್ಯಾರ್ಥಿಗಳೊಂದಿಗೆ ತೆರಳಿ ಅಲ್ಲಿನ ಇತಿಹಾಸದ ವಿಷಯ ತಿಳಿಯಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಮಹತ್ವದ ವಿಷಯ ಮನದಟ್ಟಾಗುವ ಜೊತೆಗೆ ಸ್ಮಾರಕ ರಕ್ಷಣೆಗೆ ಮುಂದಾಗುತ್ತಾರೆ ಎಂದರು. ಡಿಎಚ್‌ಒ ಡಾ. ಮಹಾದೇವಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೈ. ಸುದರ್ಶನ, ಕ್ಷೇತ್ರ ಶಿಕ್ಷಣಾಧಿಕಾರಿ ಇದ್ದರು. ಕಾರ್ಯಕ್ರಮ ಅಂಗವಾಗಿ ಕೊಪ್ಪಳದಲ್ಲಿನ ಅಶೋಕನ ಶಿಲಾಶಾಸನವಿರುವ ಗುಡ್ಡದಲ್ಲಿ ಜಿಲ್ಲೆಯ ಎಲ್ಲ ಸಿಆರ್‌ಪಿ, ಬಿಆರ್‌ಸಿ, ಸಂಯೋಜಕರು, ದೈಹಿಕ ಶಿಕ್ಷಕರು ಸೇರಿದಂತೆ ನೂರಕ್ಕೂ ಹೆಚ್ಚು ಜನ ಐತಿಹಾಸಿಕ ಸ್ಥಳಕ್ಕೆ ತೆರಳಿದರು.
Advertisement