ಕನ್ನಡಪ್ರಭ ವಾರ್ತೆ, ಕಾರವಾರ, ಆ. 2
ತಾಲೂಕಿನ ಖಾರ್ಗೇಜೂಗ ಗ್ರಾಮ ಪಂಚಾಯಿತಿ ಸುತ್ತ ನಡೆಯುವ ಅಕ್ರಮ ಮರಳು ಗಣಿಗಾರಿಕೆಯನ್ನು ನಿಲ್ಲಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶನಿವಾರ ಅಲ್ಲಿನ ನಿವಾಸಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಸ್ಥಳೀಯ ಕೃಷ್ಣಾನಂದ ಆರ್. ನಾಯ್ಕ, ತಾಲೂಕಿನ ವೈಲ್ಯಾವಾಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾರ್ಗೇಜೂಗ ಗ್ರಾಮವನ್ನು ಕಾಳಿ ನದಿ ಸುತ್ತುವರಿದಿದೆ. ಉಸಕು ಮಿಶ್ರಿತ ಊರಾದ ಇದರ ವಿಸ್ತೀರ್ಣ 1.5 ಕಿ.ಮೀ. ಉದ್ದ ಹಾಗೂ 2. ಕಿ.ಮೀ. ಅಗಲ ಇದೆ. ಬೆಳಗ್ಗೆ ನಾಲ್ಕು ಗಂಟೆಗೆ 40 ಬೋಟ್‌ಗಳು ಹಾಗೂ ಮಧ್ಯಾಹ್ನ 5 ಗಂಟೆಗೆ 20 ಬೋಟ್‌ಗಳು ಇಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿವೆ. ಅರಣ್ಯ ಇಲಾಖೆ ಸಮುದ್ರ ಕೊರೆತ ತಡೆಯಲು ಈಚೆಗೆ ನೆಟ್ಟಿದ್ದ ಕಾಂಡ್ಲಾ ಸಸಿಗಳನ್ನು ಅಕ್ರಮ ಮರಳುಗಾರಿಕೆ ನಡೆಸುವವರು ಕಿತ್ತಿದ್ದಾರೆ. ಅಲ್ಲದೇ ಯಾಂತ್ರಿಕೃತ ಬೋಟ್‌ಗಳನ್ನು ನಿಲ್ಲಿಸಲು ಇಲ್ಲಿ ನಿರ್ಮಿಸಲಾಗಿದ್ದ ಜಟ್ಟಿ ಅಕ್ರಮ ಮರಳುಗಾರಿಕೆಗೆ ಸಿಲುಕಿ ನಾಶವಾಗುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
ಅಕ್ರಮ ಮರಳು ಗಣಿಗಾರಿಕೆಯಿಂದ ಖಾರ್ಗೇಜೂಗದಲ್ಲಿ ಭೂ ಸವಕಳಿಯಾಗುತ್ತಿದೆ. ಕಾಳಿ ನದಿಯ ನೀರು ಗ್ರಾಮಕ್ಕೆ ನುಗ್ಗುತ್ತಿದೆ. ಇದರಿಂದ ಸ್ಥಳೀಯರಿಗೆ ಅಪಾಯ ಎದುರಾಗಿದೆ. ಇಲ್ಲಿಯ ಜನ ಆತಂಕದಲ್ಲಿ ಜೀವಿಸುವಂತಾಗಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೆ, ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.ಹೀಗಾಗಿ, ಕೂಡಲೇ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಬೇಕು. ಖಾರ್ಗೇಜೂಗದ ಸುತ್ತ ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಗ್ರಾಪಂ ಸದಸ್ಯ ವಿನೋದ್ ಡಿ. ನಾಯ್ಕ, ಚಂದ್ರಕಾಂತ ಎಸ್. ನಾಯ್ಕ, ಸುಮನ್ ನಾಗೇಶ ನಾಯ್ಕ, ಲತಾ ನಾಯ್ಕ, ಸಮಿತಾ ನಾಗರಾಜ ನಾಯ್ಕ ಹಾಗೂ ಇತರ ಗ್ರಾಮಸ್ಥರು ಇದ್ದರು.
Advertisement