ಕುಮಟಾ: ಅಳಕೋಡ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ ವ್ಯಾಪಾರ ತಡೆಗಟ್ಟುವಂತೆ ಸ್ಥಳೀಯ ಗ್ರಾಮ ರಕ್ಷಣಾ ಮಹಿಳಾ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಅನಂತರ ಶಾಸಕಿ ಶಾರದಾ ಶೆಟ್ಟಿ ಅವರಿಗೆ ಮನವಿ ನೀಡಿದರು. ಅಳಕೋಡ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಅನಧಿಕೃತ ಸಾರಾಯಿ ಮಾರಾಟ ನಡೆಸಲಾಗುತ್ತಿದೆ. ಇದರಿಂದ ಎಲ್ಲ ವಯಸ್ಸಿನ ಕುಡುಕರ ಸಂಖ್ಯೆ ಹೆಚ್ಚಾಗಿದ್ದು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳಿಗೆ ದೈಹಿಕ ಮಾನಸಿಕ ಹಿಂಸೆಗೆ ಕಾರಣವಾಗಿದೆ. ಮಹಿಳೆಯರಿಗೆ ಸಂಸಾರ ನಿಭಾಯಿಸುವುದು ಕಷ್ಟಕರವಾಗಿದೆ. ಚುನಾಯಿತ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಸಾರಾಯಿ ಮಾರಾಟ ಎಗ್ಗಿಲ್ಲದೇ ಸಾಗಿದೆ. ಮನೆಯಲ್ಲೇ ಸಾರಾಯಿ ತಯಾರಿಸುತ್ತಾರೆ. ಅನಧಿಕೃತವಾಗಿ ಸಾರಾಯಿ ಮಾರುವವರ ಹೆಸರನ್ನು ಸ್ಪಷ್ಟವಾಗಿ ತಿಳಿಸಿದರೂ ಅಬಕಾರಿ ಅಥವಾ ಪೊಲೀಸರು ಕ್ರಮ ಕೈಗೊಂಡಿಲ್ಲ. ತಕ್ಷಣದಿಂದಲೇ ಕಾರ್ಯಾಚರಣೆ ನಡೆಸಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಅಕ್ರಮ ಸಾರಾಯಿ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸಿ ಸಾರಾಯಿ ಮುಕ್ತ ಗ್ರಾಮವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು. ಮಹಿಳಾ ಮುಖಂಡರಾದ ಕಮಲಾ ಅಂಬಿಗ, ದುರ್ಗಾ, ಮಾದೇವಿ ಗೌಡ, ಸುಕ್ರಿ, ಭವಾನಿ ಮತ್ತಿತರರು ಮಾತನಾಡಿ, ಊರಿನಲ್ಲಿ ನೆಮ್ಮದಿ ನೆಲಸುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಕತಗಾಲಿನ ಸಭಾಭವನದ ವರೆಗೆ ಮಹಿಳೆಯರು ಪ್ರತಿಭಟನಾ ಮೆರವಣಿಗೆ ನಡೆಸಿ ಆ ನಂತರ ಅಲ್ಲಿಗೆ ಆಗಮಿಸಿದ ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಕ್ರಮಕೈಗೊಳ್ಳುವಂತೆಸೂಚಿಸಿದರು. ತಾಪಂ ಸದಸ್ಯ ಗಜಾನನ ಪೈ, ಗ್ರಾಪಂ ಸದಸ್ಯೆ ಮಹಾಲಕ್ಷ್ಮೀ, ವಿನಾಯಕ ಅಂಬಿಗ, ವಿನಾಯಕ ನಾಯ್ಕ, ಸುಕ್ರಿ, ಮಹಿಳಾ ಪ್ರಮುಖರಾದ ಗೌರಿ ಅಂಬಿಗ, ಪಾರ್ವತಿ ಮುಕ್ರಿ, ಮಂಜುಳಾ ಮುಕ್ರಿ, ಹಮ್ಮಿ ಗೌಡ, ಸರೋಜಾ ಶೇಟ್, ಎಸ್.ವಿ. ವಾರೇಕರ್, ಎಂ.ಎಂ. ಭಂಡಾರಿ ಮತ್ತಿತರರು ಇದ್ದರು.
Advertisement