ಕೊಪ್ಪಳ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕಾಲುವೆ ದುರಸ್ತಿ ಕಾಮಗಾರಿಯಲ್ಲಿ ಕೋಟ್ಯಂತರ ರುಪಾಯಿ ಅಕ್ರಮ ನಡೆದಿದ್ದು, ಸಮಗ್ರ ತನಿಖೆ ನಡೆಸುವಂತೆ ಬಳ್ಳಾರಿ ಸಂಸದ ಶ್ರೀರಾಮುಲು ಹಾಗೂ ಕೊಪ್ಪಳ ಸಂಸದ ಸಂಗಣ್ಣ ಕರಡಿ ಆಗ್ರಹಿಸಿದ್ದಾರೆ.
ತುಂಗಭದ್ರಾ ಕಾಡಾ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ, ಕೊಪ್ಪಳ ಉಸ್ತುವಾರಿ ಸಚಿವರನ್ನು ತೀವ್ರ ತರಾಟೆಗೆ ತಗೆದುಕೊಂಡರು. ಕಾಲುವೆ ನಿರ್ಮಾಣದಲ್ಲಿ ಭಾಗಿಯಾದ ಅನೇಕ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಇವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು. ಇನ್ನು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸುವುದು ವಿಳಂಬ ಮಾಡುವ ಮೂಲಕ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇದರಿಂದ ಕಾಲುವೆಗೆ ನೀರು ಬಿಡುವುದು ತಡವಾಗಿದೆ. ಇದರ ಹೊಣೆಯನ್ನು ಎರಡು ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರೇ ಹೊರಬೇಕು ಎಂದರು.
ಇನ್ನು ತುಂಗಭದ್ರಾ ಬೋರ್ಡ್ ಬಿಳಿ ಆನೆಯಂತಿದ್ದು, ಇದನ್ನು ರದ್ದು ಮಾಡುವ ಅಗತ್ಯವಿದೆ. ಇದಕ್ಕೆ ಚೇರ್ಮನ್ ಮತ್ತು ಕಾರ್ಯದರ್ಶಿಗಳು ಆಂಧ್ರದವರೇ ಇರುವುದು ಕೂಡಾ ಇದು ನಿಯಮ ಬಾಹಿರವಾಗಿದೆ. ಆದ್ದರಿಂದ ಇದನ್ನು ರದ್ದು ಮಾಡುವ ಕುರಿತು ಗೊತ್ತುವಳಿ ಮಾಡಬೇಕೆಂದು ಆಗ್ರಹಿಸಿದರೂ ಸಚಿವರು ಅಷ್ಟಾಗಿ ಗಮನ ನೀಡದೇ ಇರುವುದು ನಮಗೆ ನೋವಾಗಿದೆ. ಈ ವಿಷಯವನ್ನು ನಾವು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪ ಮಾಡುತ್ತೇವೆ ಎಂದು ಹೇಳಿದರು.
Advertisement