ಕನ್ನಡಪ್ರಭ ವಾರ್ತೆ, ಕೊಪ್ಪಳ, ಆ. 2
ದ್ವಿತೀಯ ಪಿಯುಸಿ ಪರೀಕ್ಷೆಯ ನಕಲಿ ಅಂಕಪಟ್ಟಿ ಸಲ್ಲಿಸಿ, ಗ್ರಾಮಲೆಕ್ಕಿಗರ ಹುದ್ದೆ ಸಂಪಾದಿಸಿದ್ದ ಮೂವರನ್ನು ವಜಾಗೊಳಿಸಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಆದೇಶ ಹೊರಡಿಸಿದ್ದಾರೆ.
2012ರ ಜೂನ್ ತಿಂಗಳಲ್ಲಿ ಗ್ರಾಮಲೆಕ್ಕಿಗರ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 33 ಅಭ್ಯರ್ಥಿಗಳ ಪೂರ್ವ ವೃತ್ತಾಂತದ ಬಗ್ಗೆ ಪೊಲೀಸ್ ಇಲಾಖೆಯಿಂದ ವರದಿ ಪಡೆದು, ಸ್ಥಳ ಆಯ್ಕೆಗೆ ಕೌನ್ಸೆಲಿಂಗ್ ನಡೆಸಿ, ಜ. 2, 2013ರಂದು ನೇಮಕಾತಿ ಆದೇಶವನ್ನೂ ನೀಡಲಾಗಿತ್ತು. ಉಡುಪಿ ಜಿಲ್ಲೆಯ ಗ್ರಾಮಲೆಕ್ಕಿಗರಾಗಿ ಆಯ್ಕೆಯಾದ ಕೆಲವರ ಅಂಕಪಟ್ಟಿ ನೈಜವಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು. ಒಟ್ಟು 25 ಗ್ರಾಮ ಲೆಕ್ಕಿಗರ ದ್ವಿತೀಯ ಪಿಯುಸಿ ಅಂಕ ಪಟ್ಟಿಯ ನೈಜತೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಕೋರಿ ಕೊಪ್ಪಳ ಜಿಲ್ಲಾಧಿಕಾರಿ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರು. ಈ ವೇಳೆ ಜಯಂತ್ ಎಲ್., ಹರೀಶ್ ಎಂ. ಮತ್ತು ಮನುರಾಧನ್ ಎಚ್. ಎಂಬುವರ ಅಂಕಪಟ್ಟಿಗಳು ನಕಲಿ ಎಂದು ಇಲಾಖೆ ವರದಿ ನೀಡಿದೆ.
ಯಲಬುರ್ಗಾ ತಾಲೂಕು ವಜ್ರಬಂಡಿ ಗ್ರಾಮ ಲೆಕ್ಕಿಗರಾಗಿರುವ ಜಯಂತ ಎಲ್. ನೆಲಮಂಗಲ ತಾಲೂಕು ದೊಡ್ಡಚನ್ನಹಳ್ಳಿ ಗ್ರಾಮದವರು. ತ್ಯಾಮಗೊಂಡ್ಲು ಸರ್ಕಾರಿ ಪಿಯು ಕಾಲೇಜಿನಲ್ಲಿ ಕಲಿತವರು. ಪಿಯುಸಿಯಲ್ಲಿ 305 ಅಂಕ ಪಡೆದಿದ್ದರೂ, 574 ಅಂಕಗಳನ್ನು ತೋರಿದ್ದಾರೆ. ಯಲಬುರ್ಗಾ ತಾಲೂಕು ಶಿರೂರು ಗ್ರಾಮಲೆಕ್ಕಿಗರಾಗಿರುವ ಹರೀಶ್ ಎಂ. ಹೊಸಕೋಟೆ ತಾಲೂಕಿನ ಮುಗಬಲಾದವರು. ಹೊಸಕೋಟೆ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಕೇವಲ 224 ಅಂಕ ಗಳಿಸಿದ್ದರು. ಆದರೆ, ಸಲ್ಲಿಸಿರುವ ನಕಲಿ ಅಂಕಪಟ್ಟಿಯಲ್ಲಿ 569 ಅಂಕ ತೋರಿದ್ದಾರೆ. ಯಲಬುರ್ಗಾ ತಾಲೂಕು ಬೇವೂರು ಗ್ರಾಮಲೆಕ್ಕಿಗರಾಗಿರುವ ಮನುರಾಧನ ಹನುಮಂತಗೌಡ ನೆಲಮಂಗಲ ತಾಲೂಕಿನ ಓಬಳಾಪುರದವರು. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಆದಿಚುಂಚನಗಿರಿಯ ಎಸ್.ಜಿ. ಸ್ವಾಮಿ ಸಂಯುಕ್ತ ಪಪೂ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 382 ಅಂಕ ಗಳಿಸಿದ್ದರೂ, ನೇಮಕಾತಿ ವೇಳೆ 576 ಅಂಕಗಳ ನಕಲಿ ಪಟ್ಟಿ ತೋರಿಸಿ, ಹುದ್ದೆ ಪಡಿದ್ದಾರೆ. ಕರ್ನಾಟಕ ಸೇವಾ ನಿಯಮದಂತೆ ಜು. 31ರಿಂದ ಜಾರಿಗೆ ಬರುವಂತೆ ಈ ಮೂವರನ್ನೂ ಸೇವೆಯಿಂದ ವಜಾಗೊಳಿಸಿದ್ದಾಗಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಆದೇಶದಲ್ಲಿ ತಿಳಿಸಿದ್ದಾರೆ.
Advertisement