ಕಾರಟಗಿ: ತುಂಗಭದ್ರಾ ಅಣೆಕಟ್ಟೆ ಭರ್ತಿಯಾಗಿ ನದಿಗೆ ಹೆಚ್ಚುವರಿ ನೀರು ಬಿಟ್ಟಿದ್ದು ಒಂದೆಡೆ. ಮತ್ತೊಂದೆಡೆ ಕಾಲುವೆಗೆ ನೀರು ಬಿಡುವ ಮುನ್ನವೇ ಎಡದಂಡೆ ನಾಲೆಗೆ ನೀರಾವರಿ ವ್ಯಾಪ್ತಿಗೆ ಒಳಪದವರು ಕನ್ನ ಹಾಕಲು ಸಜ್ಜಾಗಿದ್ದಾರೆ! ತುಂಗಭದ್ರಾ ಅಚ್ಚುಕ್ಟು ಪ್ರದೇಶದ ನೀರಾವರಿ ನೀತಿ ನಿಯಮ ಗಾಳಿಗೆ ತೂರಿ ಪ್ರತಿವರ್ಷ ಕೆಳಭಾಗದ ರೈತರು ಹೋರಾಡಿ ನೀರು ಪಡೆಯುವ ಸ್ಥಿತಿಗೆ ಕಾಲುವೆಗೆ ಕನ್ನವೇ ಕಾರಣ. ಮಾಹಿತಿ ಪ್ರಕಾರ ಗಂಗಾವತಿ ತಾಲೂಕಿನ ಎಡದಂಡೆ ನಾಲೆಯ ದಾಸನಾಳ ಬ್ರಿಡ್ಜ್‌ನಿಂದ ಡಂಕನಕಲ್ ಗೇಟ್‌ವರೆಗಿನ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಶನಿವಾರ ಮಧ್ಯಾಹ್ನ ತನಕ ನಾಲೆ ಮೇಲ್ಭಾಗದ ಕೆಲವರು ಕಾಲುವೆಗೆ ದೊಡ್ಡ ಪೈಪ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಕಾಲುವೆಗೆ ನೀರು ಬಿಟ್ಟ ಬಳಿಕ ಬಹುತೇಕ ರೈತರು ಆಸೆಬುರುಕತನಕ್ಕೆ ಬಲಿಯಾಗಿ ಕಾಲುವೆಗೆ ನೇರವಾಗಿ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡು ನೀರು ಕದಿಯುತ್ತಾರೆ. ಈ ಬಾರಿ ಡಂಕನಕಲ್ ಗ್ರಾಮದ ಮೇಲ್ಭಾಗದಲ್ಲಿ 24ನೇ ಕಾಲುವೆ ವ್ಯಾಪ್ತಿಯಲ್ಲಿ ಶನಿವಾರ ಕೆಲವರು ಕಾಲುವೆಯ ಒಳಮೈಯನ್ನು ಧ್ವಂಸ ಮಾಡಿ ಮೂರ್ನಾಲ್ಕು ಇಂಚಿನ ಸ್ಟೀಲ್ ಪಂಪ್‌ಗಳನ್ನು ಅಳವಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇಂಥ ದುಷ್ಕರ್ಮಿಗಳು ಕಾಂಕ್ರಿಟ್ ಕಾಲುವೆಯನ್ನು ಆನಂತರ ಮಣ್ಣಿನಿಂದ ಮುಚ್ಚುತ್ತಾರೆ. ನೀರು ಕದಿಯುವುದು ಹೆಚ್ಚಾಗಿದ್ದರಿಂದ ಅಸಲಿ ನೀರಾವರಿ ಜಮೀನಿಗೆ ನೀರು ತಲುಪುವುದು ದುಸ್ತರವಾಗಿದೆ. ಈ ಬಾರಿ ಅಧಿಕಾರಿಗಳು ಅಕ್ರಮನ್ನು ತಡೆಗಟ್ಟಿ ಕೊನೆ ಭಾಗದ ರೈತರಿಗೂ ನೀರು ತಲುಪಿಸುವ ಭರವಸೆ ನೀಡಿದ್ದರು. ಕಾಲುವೆಗೆ ನೀರು ಬಿಡುವ ದಿನವೇ ನೀರುಗಳ್ಳತನ ಸಾಗಿದ್ದು, ಬೂದಗುಂಪಾ, ದೇವಿಕ್ಯಾಂಪ್, ಹಾಲಸಮುದ್ರ, ಸಿದ್ರಾಂಪುರ, ಚೆನ್ನಳ್ಳಿ ಭಾಗದ ರೈತರನ್ನು ಕೆರಳಿಸಿದೆ.
Advertisement