ಕನ್ನಡಪ್ರಭ ವಾರ್ತೆ, ಗಂಗಾವತಿ, ಆ. 2
ನಗರದ ಮೂರು ರೈಸ್ ಮಿಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ರು. 62 ಲಕ್ಷ ಮೌಲ್ಯದ ಪಡಿತರ ಅಕ್ಕಿ, ಗೋದಿಯನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗ್ಗೆ 6 ಗಂಟೆ ಸುಮಾರಿಗೆ ದಾಳಿ ನಡೆಸಿದ ಅಧಿಕಾರಿಗಳು, ಗೋದಾಮು ಪರಿಶೀಲಿಸಿ, ಅಕ್ಕಿ, ಗೋದಿ ವಶಕ್ಕೆ ಪಡೆದಿದ್ದಾರೆ. ಸುದ್ದಿಗಾರರಿಗೆ ವಿವರ ನೀಡಿದ ಆಹಾರ ಇಲಾಖೆ ಆಯುಕ್ತ ಹರ್ಷ ಗುಪ್ತ, ಇಲಾಖೆ ಅಧಿಕಾರಿಗಳು ಕೊಪ್ಪಳ ರಸ್ತೆಯ ದಾಸನಾಳ ಸೇತುವೆ ಬಳಿ ಇರುವ ಗಣೇಶ ರೈಸ್ ಮಿಲ್ ಮೇಲೆ ದಾಳಿ ಮಾಡಿ, ಅಕ್ರಮವಾಗಿ ಸಂಗ್ರಹಿಸಿದ್ದ ರು. 50 ಲಕ್ಷ ಮೌಲ್ಯದ 1800 ಕ್ವಿಂಟಲ್ ಅಕ್ಕಿ, ರು. 1 ಲಕ್ಷ ಬೆಲೆಯ 50 ಕ್ವಿಂಟಲ್ ಗೋದಿ ಜಪ್ತಿ ಮಾಡಿದ್ದಾರೆ. ಗಂಗಾವತಿ ನಗರದ ಬನ್ನಿಗಿಡ ಕ್ಯಾಂಪಿನಲ್ಲಿರುವ ಸಿಂಗನಾಳ ಸುರೇಶ ಅವರ ಗೋದಾಮಿನಲ್ಲಿ ಸಂಗ್ರಹಿಸಿದ್ದ ರು. 8.40 ಲಕ್ಷ ಮೊಲ್ಯದ 300 ಕ್ವಿಂಟಲ್ ಅಕ್ಕಿ, ರು. 3.10 ಲಕ್ಷದ 150 ಕ್ವಿಂಟಲ್ ಗೋದಿ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
2012ರಲ್ಲಿ ಖಾಸಗಿ ಗೋದಾಮಿನಲ್ಲಿ ಸಂಗ್ರಹಿಸಿದ್ದ 200 ಕ್ವಿಂಟಲ್ ಅಕ್ಕಿ ವಶ ಪಡಿಸಿಕೊಂಡಿದ್ದರೂ ಆಹಾರ ಇಲಾಖೆ ಕ್ರಮ ಕೈಗೊಂಡಿಲ್ಲ. ಕೊಪ್ಪಳ ನಗರದ ಟಿಎಪಿಸಿಎಸ್ ಗೋದಾಮಿನಲ್ಲೂ ಪಡಿತರ ಅಕ್ಕಿ ದೊರೆತಿದ್ದು, ಇದರ ಬಗ್ಗೆ ತನಿಖೆ ನಡೆಸಿ ಪ್ರಕರಣ ದಾಖಲಿಸುವುದಾಗಿ ಹರ್ಷ ಗುಪ್ತಾ ಹೇಳಿದರು.
ಮಾಲೀಕರು ನಾಪತ್ತೆ: ದಾಳಿ ವೇಳೆ ರೈಸ್ ಮಿಲ್ ಮಾಲೀಕರು ನಾಪತ್ತೆಯಾಗಿದ್ದಾರೆ. ಮೊಬೈಲ್‌ಗಳನ್ನು ಸ್ವಿಚ್ಡ್‌ಆಫ್ ಮಾಡಿದ್ದು, ರೈಸ್ ಮಿಲ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ನಾಪತ್ತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಯ ನೇತೃತ್ವವನ್ನು ಆಹಾರ ಇಲಾಖೆ ಹೆಚ್ಚುವರಿ ಆಯುಕ್ತ ಮನೋಜಕುಮಾರ, ಸಹಾಯಕ ಆಯುಕ್ತ ಮಂಜುನಾಥ, ಡೆಪ್ಯೂಟಿ ಡೈರೆಕ್ಟರ್ ವೈ.ಎಚ್. ಲಂಬೂ, ಶಿರಸ್ತೇದಾರ್ ನಜೀರಸಾಬ್, ನೀರಿಕ್ಷಕ ಎಚ್.ವೈ. ಬಗಲಿ, ಅಜಿಜೂದ್ದೀನ್, ಗಂಗಾಧರ, ಪಿ.ಐ. ಕಾಳಿಕೃಷ್ಣ ವಹಿಸಿದ್ದರು.
Advertisement