ಕನ್ನಡಪ್ರಭ ವಾರ್ತೆ, ಕೊಪ್ಪಳ, ಆ. 2
ನಗರದ ಹಲವೆಡೆ ಶನಿವಾರ ಬೆಳಗಿನ ಜಾವ ಐದು ಮನೆಗಳಲ್ಲಿ 8ಕ್ಕೂ ಹೆಚ್ಚು ಜನರಿದ್ದ ತಂಡ ದರೋಡೆ ನಡೆಸಿದೆ. ರಕ್ಷಣೆಗೆ ಧಾವಿಸಿ ಬಂದ ಸ್ಥಳೀಯರನ್ನೂ ಬೆದರಿಸಿ, ಮಾಂಗಲ್ಯ ಸರ, ಆಭರಣ ಕಿತ್ತು ಪರಾರಿಯಾಗಿದ್ದಾರೆ.
ಕಾಳಿದಾಸ ನಗರದ ಓಂಕಾರ ಅವಾಜಿ ಮನೆಗೆ ಶನಿವಾರ ಬೆಳಗಿನ ಜಾವ 2.30ರ ವೇಳೆಗೆ ಚಿಲಕ ಮುರಿದು ನುಗ್ಗಿದ ಕಳ್ಳರು, ಮನೆ ಮಾಲೀಕನನ್ನು ಬೆದರಿಸಿ, ತಿಜೋರಿಯಲ್ಲಿದ್ದ 8 ತೊಲೆ ಬಂಗಾರ, ರು. 15-20 ಸಾವಿರ ನಗದು ಕದ್ದಿದ್ದಾರೆ. ಪುತ್ರನ ಕೋಣೆಯನ್ನು ಲಾಕ್ ಮಾಡಿ, ಆತ ಹೊರಬರದಂತೆ ತಡೆದಿದ್ದಾರೆ. ಓಂಕಾರಪ್ಪನ ಪತ್ನಿ ವನಜಾಕ್ಷಿಯ ಮಾಂಗಲ್ಯ ಸೆಳೆದು ಪರಾರಿಯಾಗಿದ್ದಾರೆ.
ಹಮಾಲರ ಕಾಲೋನಿಯ ನಾಲ್ಕಾರು ಮನೆ ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿದ ಕಳ್ಳರು, ಓಣಿಯ ವಿದ್ಯುದ್ದೀಪಗಳನ್ನು ಒಡೆದಿದ್ದಾರೆ. ಮನೆಗಳ ಗಾಜು, ಕಿಟಕಿಗಳನ್ನೂ ಧ್ವಂಸ ಮಾಡಿದ್ದಾರೆ. ಪಾಷಾ ಮೇಸ್ತ್ರಿ ಮುಜಾವರ್ ಮನೆಗೆ ಬೆಳಗಿನ ಜಾವ 3.30ರ ವೇಳೆಗೆ ನುಗ್ಗಿ, ಅಲ್ಲಿ ಮಲಗಿದ್ದ ಹುಡುಗರಿಗೆ ಚಾಕು, ಮಚ್ಚು ತೋರಿಸಿ, ಮದುವೆಗಾಗಿ ತಂದಿದ್ದ 20 ತೊಲೆ ಬೆಳ್ಳಿ, 2 ತೊಲೆ ಬಂಗಾರ ಕದ್ದಿದ್ದಾರೆ. ಶಬ್ದ ಕೇಳಿ ಓಡಿಬಂದ ನೆರೆ ಮನೆಯವರಾದ ಸುಮಂಗಲಮ್ಮ ಪೂಜಾರ, ಮುನ್ನಾ ಬೇಗಂ ಬಾಷಾಸಾಬ್ ಅವರ ಮಾಂಗಲ್ಯವನ್ನೂ ಕಿತ್ತುಕೊಂಡು, ಕಲ್ಲೆಸೆದಿದ್ದಾರೆ.
ಮೂತ್ರ ವಿಸರ್ಜನೆಗೆ ಬಂದ ಮಲ್ಲನಗೌಡ ಪೊಲೀಸ್‌ಪಾಟೀಲ ಎಂಬಾತನ ಕಾಲು, ಕೈ, ತಲೆಗೆ ಮಚ್ಚಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಇದನ್ನು ನೋಡಿ ಕೂಗಿಕೊಂಡ ಪತ್ನಿ ಸಾವಿತ್ರಮ್ಮಗೆ ಕಟ್ಟಿಗೆಯಿಂದ ಹೊಡೆದು, ಮಾಂಗಲ್ಯ ಕಿತ್ತುಕೊಂಡಿದ್ದಾರೆ. ಎದ್ದು ಬಂದ ಮಗ ಕಿರಣ ಕುಮಾರ್ ಕುತ್ತಿಗೆಗೂ ಮಚ್ಚು ಹಿಡಿದು ಕೊಲ್ಲುವುದಾಗಿ ಹೆದರಿಸಿದ್ದಾರೆ. ಈ ವೇಳೆಗೆ ಜನ ಸೇರಿದ್ದರಿಂದ ದರೋಡೆಕೋರರು ಪಕ್ಕದ ಹೊಲಗಳತ್ತ ಓಡಿ ಹೋಗಿದ್ದಾರೆ. ಬಿ.ಟಿ. ಪಾಟೀಲ್ ನಗರ, ಸಿದ್ದೇಶ್ವರ ನಗರದಲ್ಲೂ ಕಳ್ಳತನಾಗಿದೆ.
ದರೋಡೆ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಕಳ್ಳತನಕ್ಕೆ ಬಂದವರು ತೆಲುಗು, ಹಿಂದಿ ಮಾತನಾಡುತ್ತಿದ್ದರೆಂದು ತಿಳಿದುಬಂದಿದೆ. ದರೋಡೆ ನಡೆದ ಮನೆಗಳಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್ ಭೇಟಿ ನೀಡಿ ಜನತೆಗೆ ಧೈರ್ಯ ತುಂಬಿದ್ದಾರೆ.
Advertisement