ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 31
ಶಾಲೆಯಲ್ಲಿ ಉತ್ತಮ ಕಲಿಕೆಗೆ ಪೂರಕ ವಾತಾವರಣವನ್ನು ಶಿಕ್ಷಕರು ಕಲ್ಪಿಸುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಶಿಕ್ಷಕರಿಗೆ ಸಲಹೆ ನೀಡಿದರು.
ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ, 2014- 15ನೇ ಸಾಲಿನ ಫಲಿತಾಂಶ ಉತ್ತಮಪಡಿಸಲು ಕ್ರಿಯಾಯೋಜನೆ ತಯಾರಿ ಕಾರ್ಯಾಗಾರ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಶೇ. 100ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 13ನೇ ಸ್ಥಾನ ಪಡೆದು ಜಿಲ್ಲೆ ಉತ್ತಮ ಸಾಧನೆ ತೋರಿದೆ. ಪ್ರಸಕ್ತ ವರ್ಷ ಇನ್ನಷ್ಟು ಉತ್ತಮಪಡಿಸಲು ಅವಕಾಶವಿದೆ. ಜಿಲ್ಲೆ ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿದ್ದರೂ, ಪ್ರತಿಭೆಗಳಿಗೆ ಯಾವುದೇ ಕೊರತೆಯಿಲ್ಲ. ಜಿಲ್ಲೆಯ ಶಿಕ್ಷಕರಲ್ಲೂ ಒಳ್ಳೆಯ ಪ್ರತಿಭೆಯಿದೆ. ಮಕ್ಕಳ ಕಲಿಕೆಗೆ ಶಿಕ್ಷಕರು ಪೂರಕ ವಾತಾವರಣ ಕಲ್ಪಿಸಲು ಕಾರ್ಯಚಟವಟಿಕೆ ಹಮ್ಮಿಕೊಳ್ಳಬೇಕು. ಶಾಲಾ ಗೋಡೆಗಳ ಮಧ್ಯೆ ಶಿಕ್ಷಕರು ಬೋಧನೆ ಸೀಮಿತಗೊಳಿಸದೆ, ಸೃಜನಶೀಲ, ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳನ್ನು ಪ್ರೇರೇಪಿಸಲು ಹೊಸ ಯೋಜನೆ ಬಳಸಬೇಕು ಎಂದರು.
ಜಿಪಂ ಸಿಇಒ ಕೃಷ್ಣ ಉದಪುಡಿ ಮಾತನಾಡಿ, ಜಿಲ್ಲೆಯಲ್ಲಿ ಗುಳೇ ಹೋಗುವುದು ಕಂಡು ಬರುತ್ತಿದ್ದು, ಅಂತ ಕುಟುಂಬದವರು ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳು ಮಾಡದೆ, ಉತ್ತಮ ಶಿಕ್ಷಣ ನೀಡಲು ಶ್ರಮಿಸಬೇಕು. ವಿರ್ದ್ಯ್ಙಾಗಳ ಅನುಕೂಲಕ್ಕೆ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ವಸತಿ ನಿಲಯ ಸ್ಥಾಪಿಸಲು ಜಿಪಂ ಕ್ರಮ ಕೈಗೊಳ್ಳುತ್ತಿದೆ ಎಂದರು.
ಡಿಡಿಪಿಐ ಜಿ.ಎಚ್. ವೀರಣ್ಣ ಪ್ರಾಸ್ತಾವಿಕ ಮಾತನಾಡಿ, ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆ ಶೇ. 81.69ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ 13ನೇ ಸ್ಥಾನ ಗಳಿಸಿದೆ. 2012- 13ನೇ ಸಾಲಿನಲ್ಲಿ ಜಿಲ್ಲೆ 16ನೇ ಸ್ಥಾನ ಗಳಿಸಿತ್ತು. ಈ ಪೈಕಿ ಜಿಲ್ಲೆಯ ಸರ್ಕಾರಿ ಶಾಲೆಗಳೇ ಖಾಸಗಿ ಶಾಲೆಗಳಿಗಿಂತ ಉತ್ತಮ ಸಾಧನೆ ತೋರಿವೆ. ಕಳೆದ ಬಾರಿ ಜಿಲ್ಲೆಯಲ್ಲಿ ಫಲಿತಾಂಶ ಸುಧಾರಣೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ವಿಷಯ ಪರಿಣಿತರಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಯಲಬುರ್ಗಾ ತಾಲೂಕು ಕುಕನೂರಿನಲ್ಲಿ ವಿಷಯ ತಜ್ಞರೊಂದಿಗೆ ವಿದ್ಯಾರ್ಥಿಗಳ ನೇರ ಸಂವಾದ, ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆದಿದೆ. ಇದರಿಂದ ಫಲಿತಾಂಶ ಸುಧಾರಣೆಗೆ ಸಹಕಾರಿಯಾಗಿದೆ. ಈ ವರ್ಷ ಇನ್ನಷ್ಟು ಉತ್ತಮ ಫಲಿತಾಂಶಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ, ಶ್ರಮಿಸಲಾಗುವುದು ಎಂದು ತಿಳಿಸಿದರು.
ಜಿಪಂ ಅಧ್ಯಕ್ಷ ಅಮರೇಶ್ ಕುಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಫಲಿತಾಂಶ ಇನ್ನಷ್ಟು ಸುಧಾರಿಸಲು ಜಿಪಂ ಎಲ್ಲ ಅಗತ್ಯ ನೆರವು ನೀಡಲಿದೆ ಎಂದರು. ಯುನಿಸೆಫ್‌ನ ಹರೀಶ್ ಜೋಗಿ, ಮುರಳಿ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಶೇ. 100ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸನ್ಮಾನಿಸಲಾಯಿತು.
Advertisement