ಗಂಗಾವತಿ: ತಾವರಗೇರಾ ಗ್ರಾಮದ ಬನಶಂಕರಿ ದೇವಸ್ಥಾನದಲ್ಲಿ ಹಲವು ತಿಂಗಳಿನಿಂದ ಗ್ರಾಮದ ಸಾರ್ವಜನಿಕರನ್ನು ಹಾಗೂ ಮುಗ್ಧರನ್ನು ಮೂಢನಂಬಿಕೆಯಡಿ ವಂಚಿಸುತ್ತಿದ್ದ ಕಾಮಿಸ್ವಾಮಿ ಯಂಕಣ್ಣ ಪ್ರಕರಣ ವರದಿ ಮಾಡಲು ತೆರಳಿದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಹಾಗೂ ಪ್ರತಿಭಟಿಸಿದ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರ ಮೇಲೆ ದಾಖಲಿಸಿದ ಸುಳ್ಳು ಮೊಕದ್ದಮೆ ವಾಪಾಸ್ ಪಡೆಯುವಂತೆ ಒತ್ತಾಯಿಸಿ ಕರವೇ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧ್ಯಕ್ಷ ರಾಜೇಶ ಅಂಗಡಿ ಮಾತನಾಡಿ, ಕೌಟಂಬಿಕ ಸಮಸ್ಯೆಗಳನ್ನು ಹೊತ್ತು ಬರುವ ಮಹಿಳೆಯರಿಗೆ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವುದಾಗಿ ನಂಬಿಸಿ ಪೂಜೆ ಹೆಸರಿನಲ್ಲಿ ಅವರನ್ನು ತನ್ನ ಕಾಮತೃಪ್ತಿಗಾಗಿ ಬಳಸಿಕೊಳ್ಳುತ್ತಿದ್ದಾನೆ. ಇದನ್ನು ಮಹಿಳೆಯರು ಪ್ರಶ್ನಿಸಲು ಮುಂದಾದರೆ ನನ್ನ ಮೈಮೇಲೆ ದೇವಿ ಬರುತ್ತಾಳೆ ಏನಾದರೂ ಮಾಡಿದರೆ ನಿನ್ನ ಪ್ರಾಣಕ್ಕೆ ಸಂಚಕಾರವಿದೆ ಎಂದು ಹೆದರಿಸುತ್ತಿದ್ದ ಕಾಮಿಸ್ವಾಮಿ ಯಂಕಣ್ಣನ ವರ್ತನೆ ಖಂಡನೀಯ ಎಂದರು. ಈ ಪ್ರಕರಣ ಕುರಿತು ವರದಿ ಮಾಡಲು ಬಂದಿದ್ದ ಮಾಧ್ಯಮ ವರದಿಗಾರರ ಮೇಲೆ ಕೆಲವರು ಹಲ್ಲೆ ನಡೆಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ತೀವ್ರವಾಗಿ ವಿರೋಧಿಸುತ್ತದೆ. ತಮ್ಮ ಮೇಲೆ ತಾವರಗೇರಾ ಪೊಲೀಸರು ಸುಳ್ಳು ಮೊಕದ್ದಮೆ ದಾಖಲಿಸಿಕೊಂಡಿದ್ದು, ಕೂಡಲೇ ಆ ಮೊಕದ್ದಮೆ ವಾಪಾಸ್ ಪಡೆಯಬೇಕು. ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ಜಂಗರ್, ಹೊನ್ನಪ್ಪ ನಾಯಕ, ನಾಗರಾಜ ಗೂಗಿಬಂಡಿ, ನಾಗರಾಜ ಹಕ್ಕಲ್, ಎಸ್.ಎಸ್. ಹೈದರಲಿ, ಈರಣ್ಣ ಮಡಿವಾಳ, ವೆಂಕಟೇಶಬಾಬು, ಅವಿನ್, ಕುಮಾರ್, ಮುರುಗೇಶ, ಯಮನೂರ, ರವಿ, ಸೈಯ್ಯದ್, ನವೀಂ ಹೈದರ್, ಮಹೇಶ, ಶಿವು, ಶಶಿ, ಶೇಷ, ರಾಜಾ ಮತ್ತಿತರರು ಭಾಗವಹಿಸಿದ್ದರು.
Advertisement