ಜೂಜಿಗಾಗಿ ಸೀರೆಯುಟ್ಟ ಪುರುಷರು

Updated on

 ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 31
ನಾಗರ ಪಂಚಮಿ ವೈವಿಧ್ಯಮಯ ಆಚರಣೆಗಳ ಆಗರ. ಹಬ್ಬ ಎಂದರೆ ಕೇವಲ ಮಹಿಳೆಯರಿಗೆ ಆದ್ಯತೆ ಜಾಸ್ತಿ ಎನ್ನುವ ಮಾತು ಇತ್ತು. ಆದರೆ, ಇದಕ್ಕೆ ಹೊರತಾಗಿ ನಾಗರ ಪಂಚಮಿಯಲ್ಲಿ ಮಹಿಳೆಯರಂತೇ ಪುರುಷರು ಕೆಲ ಆಚರಣೆಯಲ್ಲಿ ತೊಡಗುತ್ತಾರೆ. ಅದರಲ್ಲೂ ಜೂಜಾಟ ಆಡುವುದು ವಿಶೇಷ. ಅದೊಂದು ರೀತಿಯ ಸಂಭ್ರಮ. ಜೂಜಾಟ ಎಂದರೆ ಮಟ್ಕಾ, ಇಸ್ಪೀಟ್ ಆಟವಲ್ಲ, ಇದು ಸವಾಲೊಡ್ಡುವ ಜೂಜಾಟ.
ಭಾಗ್ಯನಗರದ ಶ್ರೀಕಾಂತ ಹಾಗೂ ಗೆಳೆಯರು ಸೇರಿ ಒಡ್ಡಿದ ಸವಾಲಿನ ಜೂಜಾಟಕ್ಕೆ ಭಾಗ್ಯನಗರದ ಬಸಪ್ಪ ತೆಗ್ಗಿನಮನಿ ಹಾಗೂ ಸೋಮಣ್ಣ ಬುರ್ಲಿ ಎಂಬುವರು ಸೀರೆಯುಟ್ಟು ಮೆರವಣಿಗೆಯಲ್ಲಿ ನರ್ತಿಸುತ್ತ ಸಾಗಿದರು. ಇದನ್ನು ನೋಡುವುದಕ್ಕೆ ಜನರು ಮುಗಿಬಿದ್ದಿದ್ದರು.
ಜೂಜಾಟಕ್ಕೂ ಮುನ್ನ ಆದ ಒಪ್ಪಂದದಂತೆ ಈ ಇಬ್ಬರು ಸೀರೆಯುಟ್ಟು ಕೊಪ್ಪಳ ನಗರದ ಗಡಿಯಾರ ಕಂಬದಿಂದ ಭಾಗ್ಯನಗರದವರೆಗೆ ಕಾಲುನಡಿಗೆಯಲ್ಲಿ ಮೆರವಣಿಗೆಯಲ್ಲೇ ಸಾಗಿದರು. ಇದಕ್ಕಾಗಿ ಇದ್ದ ಬೆಟ್ಟಿಂಗ್ ಎಷ್ಟು ಗೊತ್ತೆ? ಐದು ಸಾವಿರ ರುಪಾಯಿ. ಸವಾಲನ್ನು ಸ್ವೀಕಾರ ಮಾಡಿ ಸೀರೆಯುಟ್ಟು ನಡೆಯುವ ಮೂಲಕ ಐದು ಸಾವಿರ ರುಪಾಯಿ ಬಾಚಿಕೊಂಡರು. ಇದು ಕೇವಲ ಉದಾಹರಣೆ ಮಾತ್ರ.
ಇಂಥ ಅದೆಷ್ಟೋ ಸವಾಲುಗಳು, ಜೂಜಾಟ ಜಿಲ್ಲಾದ್ಯಂತ ನಡೆಯುತ್ತವೆ. ಅದರಲ್ಲೂ ಗ್ರಾಮೀಣ ಕ್ರೀಡೆಯಾಟದ ಸಡಗರವೇ ಬೇರೆ. ನಿಂಬೆ ಹಣ್ಣನ್ನು ಇಂತಿಷ್ಟು ದೂರ ಎಸೆಯಬೇಕು ಎನ್ನುವುದು, ಇದಕ್ಕಾಗಿ ಐದು ನೂರು, ಸಾವಿರ ರುಪಾಯಿ ಜೂಜು ಕಟ್ಟುವುದು ಸಾಮಾನ್ಯ. ಇದಲ್ಲದೆ ಮರಳು ತುಂಬಿದ ಕೊಡ ಎತ್ತುವುದು, ಇದಕ್ಕಾಗಿ ಯುವಕರಲ್ಲಿ ದೊಡ್ಡ ಸ್ಪರ್ಧೆಯೇ ಏರ್ಪಡುತ್ತದೆ. ಬಾಯಿಯಿಂದ ತುಂಬಿದ ಕೊಡ ಎತ್ತುವುದು ಪಂಚಮಿ ಹಬ್ಬದಲ್ಲಿ ಸ್ಪರ್ಧೆಯ ವಿಶೇಷ. ಹೀಗೆ ಗ್ರಾಮಕ್ಕೆ ಹತ್ತಾರು ವಿಶೇಷ ಆಟಗಳು ನಡೆಯುತ್ತಲೇ ಇರುತ್ತವೆ. ನಿತ್ಯದ ಕೆಲಸ ಮರೆತೂ ಇಂಥ ಆಟದಲ್ಲಿ ತೊಡಗಿರುತ್ತಾರೆ ಗ್ರಾಮೀಣರು.
ಹಾಲೆರೆಯುವುದು: ಇನ್ನು ಹೆಸರೆ ಹೇಳುವಂತೆ ನಾಗರ ಪಂಚಮಿ ನಿಮಿತ್ತ ಕಲ್ಲಿನ ನಾಗಪ್ಪಗೆ ಹಾಲೆರೆಯುತ್ತಾರೆ. ಉಂಡೆ ನೈವೇದ್ಯ ಮಾಡುತ್ತಾರೆ. ಇದಕ್ಕಾಗಿ ಮಹಿಳೆಯರು ಸಿದ್ಧವಾಗಿ, ಕಲ್ಲಿನ ನಾಗಪ್ಪ ಇರುವಲ್ಲಿಗೆ ಹೋಗಿ ಹಾಲೆರೆದು ಬರುತ್ತಾರೆ. ನಾಗಪ್ಪನಿಗೆ ಹಾಲೆರೆದ ಮೇಲೆಯೇ ಮುಂದಿನ ಧಾರ್ಮಿಕ ಕಾರ್ಯಕ್ರಮಗಳು ಮನೆಯಲ್ಲಿ ನಡೆಯುತ್ತವೆ. ಇದಾದ ನಂತರ ಬಗೆ ಬಗೆ ಉಂಡೆಯನ್ನು ಮನೆಯವರೆಲ್ಲ ಕುಳಿತು ಊಟ ಮಾಡುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com