ಮಂಡ್ಯ: 13ನೇ ಮುಖ್ಯಮಂತ್ರಿಯಾಗಿ 3ನೇ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ಮಾತೆಗೆ ಬಾಗಿನ ಸಲ್ಲಿಸಿದರು.
ಬನ್ನೂರಿನಿಂದ ರಸ್ತೆ ಮಾರ್ಗವಾಗಿ ಕೆಆರ್ಎಸ್ಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರಾವಣ ಮಾಸ, ಶುಕ್ಲ ಪಕ್ಷ ಅಭಿಜಿನ್ ಮುಹೂರ್ತದಲ್ಲಿ ಅರಿಶಿನ ಲೇಪಿತ ಮೊರದಲ್ಲಿ ಹಾಕಲಾಗಿದ್ದ ಬಾಗಿನವನ್ನು ಶ್ರದ್ಧಾಭಕ್ತಿಯಿಂದ ಕಾವೇರಿ ಮಡಿಲಿಗೆ ಸಮರ್ಪಿಸಿ ಧನ್ಯತಾ ಭಾವ ವ್ಯಕ್ತಪಡಿಸಿದರು.
ಕೆಆರ್ಎಸ್ಗೆ ಮಧ್ಯಾಹ್ನ 3.40ಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪುರೋಹಿತರು ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ವೇದಘೋಷದೊಂದಿಗೆ ಪೂರ್ಣಕುಂಭ ಸ್ವಾಗತ ಕೋರಿದರು. ಕೃಷ್ಣರಾಜಸಾಗರ ಅಣೆಕಟ್ಟೆ ಮೈದುಂಬಿದಾಗ ಬಾಗಿನ ಸಮರ್ಪಿಸುವ ಪದ್ಧತಿ ರಾಜ ಮಹಾರಾಜರ ಕಾಲದಿಂದಲೂ ಚಾಲ್ತಿಯಲ್ಲಿತ್ತು. ಆನಂತರ ಗುಂಡೂರಾವ್ ಅವರು ಮುಖ್ಯಮಂತ್ರಿಯಾದ ಬಳಿಕ ಮತ್ತೆ ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸುವ ಕಾರ್ಯ ಚಾಲನೆಗೊಂಡಿತು.
ಸಾಮಾನ್ಯವಾಗಿ ಆಷಾಡ ಮತ್ತು ಶ್ರಾವಣ ಮಾಸದ ನಡುವೆ ಎಲ್ಲಾ ನದಿಗಳು ಭರ್ತಿಯಾಗುತ್ತವೆ. ಅದರಂತೆ ಕೃಷ್ಣರಾಜಸಾಗರ ಜಲಾಶಯವೂ ಸಂಪ್ರದಾಯದಂತೆ ಬಾಗಿನ ಅರ್ಪಿಸಲಾಗಿದೆ. ಬಾಗಿನ ಅರ್ಪಿಸುವ ಮೊರದಲ್ಲಿ ನವಧಾನ್ಯಗಳು, ಅರಿಶಿನ ಕುಂಕುಮ, ಸೀರೆ, ರವಿಕೆ, ಬಳೆ, ಬಳೆಬಿಚ್ಚಾಳೆ, ಹೂವು, ಬಾಳೆಹಣ್ಣು ಎಲ್ಲವನ್ನೂ ಹೊಂದಿದ ಬಾಗೀನವನ್ನು ಮುಖ್ಯಮಂತ್ರಿಗಳು ಕಾವೇರಿ ಮಾತೆಗೆ ಸಮರ್ಪಿಸಿದರು. ಮುಖ್ಯಮಂತ್ರಿಗಳೊಂದಿಗೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್, ಲೋಕೋಪಯೋಗಿ ಸಚಿವ ಮಹದೇವಪ್ಪ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ಡಿ.ಸಿ. ತಮ್ಮಣ್ಣ, ಕೆ.ಎಸ್. ಪುಟ್ಟಣ್ಣಯ್ಯ, ಮರಿತಿಬ್ಬೇಗೌಡ, ಸೋಮಶೇಖರ್, ಮಾಜಿ ಶಾಸಕರಾದ ಎಂ.ಎಸ್.ಆತ್ಮಾನಂದ, ಕಲ್ಪನಾ ಸಿದ್ದರಾಜು, ಕೆ.ಬಿ.ಚಂದ್ರಶೇಖರ್, ಸುರೇಶ್ ಗೌಡ, ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್, ಜಿಪಂ ಸಿಇಒ ಸಿಂಧೂರಿ ಸೇರಿದಂತೆ ಅನೇಕರು ಹಾಜರಿದ್ದರು.
ಪೊಲೀಸ್ ಬಂದೋಬಸ್ತ್: ಪೊಲೀಸರನ್ನು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಬಂದೋಬಸ್ತಿಗೆ ನಿಯೋಜಿಸಿದ್ದರಿಂದ ಕಿರಿಕಿರಿ ಹೆಚ್ಚಾಯಿತು. ಮೂವರು ಡಿವೈಎಸ್ಪಿ, ಆರು ಮಂದಿ ಸಿಪಿಐ, 18 ಸಬ್ ಇನ್ಸ್ಪೆಕ್ಟರ್, 20 ಹೆಡ್ಕಾನ್ಸ್ಟೇಬಲ್, 1 ಕೆಎಸ್ಆರ್ಪಿ ತುಕಡಿ ಹಾಗೂ 3 ಡಿಎಆರ್ಗಳನ್ನು ಬಂದೋಬಸ್ತಿಗೆ ನಿಯೋಜಿಸಲಾಗಿತ್ತು.
Advertisement