ಮಂಡ್ಯ: ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ಮೈಸೂರು-ಬೆಂಗಳೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ
ಎದುರು ಕೆಲಕಾಲ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2011ನೇ ಸಾಲಿನ ಗೆಜೆಟೆಡ್ಪ್ ಪ್ರೊಬೇಷನರ್ಸ್ ಹುದ್ದೆಗೆ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಐಡಿ ತನ್ನ ಮಧ್ಯಂತರ ವರದಿ ನೀಡಿದೆ.
ಅದರ ಆಧಾರದ ಮೇಲೆ ಸರ್ಕಾರ ಲೋಕ ಸೇವಾ ಆಯೋಗಕ್ಕೆ ಮರು ಮೌಲ್ಯಮಾಪನ, ಮರು ಸಂದರ್ಶನ ಮಾಡುವಂತೆ ಸರ್ಕಾರ ಆದೇಶ ನೀಡಿತ್ತು. ಆದರೆ ಇದನ್ನು ನಿರಾಕರಿಸಿರುವ ಕರ್ನಾಟಕ ಲೋಕಸೇವಾ ಆಯೋಗ ಮರುಮೌಲ್ಯಮಾಪನ, ಮರು ಸಂದರ್ಶನಕ್ಕೆ ಆದೇಶ ನೀಡುವ ಅಧಿಕಾರ ಸರ್ಕಾರಕ್ಕೆ ಎಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೆ ತನ್ನ ಪರಮಾಧಿಕಾರವನ್ನು ಬಳಸಿಕೊಂಡ ಇಡೀ ಅಧಿಸೂಚನೆಯನ್ನೇ ಹಿಂದಕ್ಕೆ ಪಡೆಯಲು ಹೊರಟಿರವ ಸರ್ಕಾರದ ಕ್ರಮದಿಂದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದೇಶ ನೀಡಿ: ಸಿಐಡಿ ವರದಿಯಲ್ಲಿರುವ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು. ಬೆಳೆಯ ನಡುವೆ ಇರುವ ಕಳೆಯನ್ನು ತೆಗೆಯಬೇಕೇ ಹೊರತು ಇಡೀ ಬೆಳೆಯನ್ನೇ ಕೊಚ್ಚಿಹಾಕಬಾರದು. 2011ನೇ ಸಾಲಿನ ಗೆಜೆಟೆಡ್ಪ್ ಪ್ರೊಬೆಷನರ್ಸ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಸಾಕಷ್ಟು ಮಂದಿ ಹಿಂದುಳಿದ, ಅಲ್ಪಸಂಖ್ಯಾತ ಪ್ರತಿಭಾನ್ವಿತ ಅಭ್ಯರ್ಥಿಗಳೂ ಇದ್ದಾರೆ. ಅವರಿಗೆ ಶೀಘ್ರ ನೇಮಕಾತಿ ಆದೇಶವನ್ನು ನೀಡಬೇಕು ಎಂದು ಆಗ್ರಹಿಸಿದರು. ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಪ್ರತಿಭಾವಂತ ಅಭ್ಯರ್ಥಿಗಳ ಹಿತಕಾಯುವ ದೃಷ್ಠಿಯಿಂದ ಕೆ.ಎ.ಎಸ್.2011ರ ಆಯ್ಕೆ ಪಟ್ಟಿಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶ ನೀಡಿದೆ. ಸರ್ಕಾರವು ಈ ಬಗ್ಗೆ ಗಮನ ಹರಿಸಿ ಶೀಘ್ರ ಈ ಪ್ರಕರಣವನ್ನು ಸುಖಾಂತ್ಯಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಮೊಹಮ್ಮದ್ ತಾಹೇರ್, ಪ್ರಧಾನ ಕಾರ್ಯದರ್ಶಿ ಅಸ್ಲರ್ ಅಹ್ಮದ್, ನವೀದ್ ಪಾಷ ಇರ್ಫಾನ್ ಸೇರಿ ಹಲವರು ಭಾಗವಹಿಸಿದ್ದರು.
5-6 ವರ್ಷ ಕಠಿಣ ಪರಿಶ್ರಮ
ಒಬ್ಬ ಅಭ್ಯರ್ಥಿ ಕೆ.ಪಿ.ಎಸ್.ಸಿ, ಯು.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ಒಮ್ಮೆ ಯಶಸ್ಸು ಸಾಧಿಸಬೇಕಾದರೆ ಸುಮಾರು 5-6 ವರ್ಷ ಕಠಿಣ ಪರಿಶ್ರಮ ಪಡುತ್ತಾನೆ. ತನ್ನ ಜೀವನದ ಅನೇಕ ಅಗತ್ಯತೆಗಳನ್ನು ಈ ಕಾರಣಕ್ಕೆ ತ್ಯಾಗ ಮಾಡಿ ಶ್ರಮಿಸಿರುತ್ತಾನೆ. ಅಂತಹ ಅಭ್ಯರ್ಥಿಗಳ ಹಿತಾಸಕ್ತಿಯನ್ನು ಕಾಯುವುದು ಸರ್ಕಾರದ ಕರ್ತವ್ಯವಾಗಿದೆ. ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
Advertisement