ಕೆಆರ್ಎಸ್ ನಾಲೆಗಳ ಆಧುನೀಕರಣ: ಸಿಎಂ ಭರವಸೆ

ಮಂಡ್ಯ : ಕೃಷ್ಣರಾಜ ಸಾಗರ ಅಣೆಕಟ್ಟೆಯ ವಿ.ಸಿ.ನಾಲೆ ಸೇರಿದಂತೆ ಎಲ್ಲಾ ಎಂಟು ನಾಲೆಗಳನ್ನು ಆಧುನೀಕರಣ ಮಾಡಲಾಗುವುದು. ಆದ್ಯತೆ ಮೇರೆಗೆ ಹಂತ ಹಂತವಾಗಿ ನಾಲೆಗಳ ಆಧುನೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.
ಹೇಮಾವತಿ, ಹಾರಂಗಿ, ಕಬಿನಿ, ಕೆ.ಆರ್.ಎಸ್. ಭಾಗದ ನಾಲೆಗಳ ಆಧುನೀಕರಣ ನಡೆಯುತ್ತಿದ್ದು, ಅದಕ್ಕೆ ಅಗತ್ಯವಾದ ಹಣಕಾಸಿನ ನೆರವನ್ನೂ ನೀಡಲಾಗಿದೆ. ನಾಲೆಗಳ ಆಧುನೀಕರಣದಿಂದ  ವಿ.ಸಿ.ನಾಲೆ ವ್ಯಾಪ್ತಿಯ 1,95,972 ಎಕರೆ ಹಾಗೂ ದೇವರಾಜ ಅರಸು ನಾಲೆಯ 80 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ ಎಂದರು.
ಸದ್ಬಳಕೆಯಾಗಲಿ: ನಾಲೆಗಳ ಆಧುನೀಕರಣಗೊಂಡಲ್ಲಿ ನೀರು ಪೋಲಾಗುವುದು ತಪ್ಪುತ್ತದೆ. ಕಡೇ ಭಾಗದ ರೈತರಿಗೂ ನೀರು ತಲುಪುತ್ತದೆ. ರೈತರು ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿನಾಕಾರಣ ಪೋಲು ಮಾಡಬಾರದು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಲು ಕೃಷಿ ಬೆಲೆ ಆಯೋಗ ರಚನೆ ಮಾಡಲಾಗಿದೆ. ಕಬ್ಬು ಬೆಳೆಗಾರರಿಗೆ ಟನ್ಗೆ 100 ರು. ತೆರಿಗೆ ಮನ್ನಾ ಮತ್ತು 150 ರು. ಸಬ್ಸಿಡಿ ನೀಡಲಾಗಿದೆ. ಇದು ದೇಶದಲ್ಲೇ ನಮ್ಮ ಸರ್ಕಾರದ ಮಾಡಿರುವ ಸಾಧನೆ ಎಂದು ತಿಳಿಸಿದರು.
ಮುಟ್ಟುಗೋಲು: ಸಕ್ಕರೆ ಕಾರ್ಖಾನೆಗಳು ರೈತರಿಗೆ ಹಣ ಪಾವತಿ ಮಾಡದಿದ್ದಲ್ಲಿ ಕಾರ್ಖಾನೆಯಲ್ಲಿ ದಾಸ್ತಾನಿರುವ ಸಕ್ಕರೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಆನಂತರ ಸಕ್ಕರೆ ಮಾರಾಟ ಮಾಡಿ ರೈತರಿಗೆ ಬಾಕಿ ಪಾವತಿ ಮಾಡಲಾಗುತ್ತಿದೆ. ರೈತರ ರಾಗಿ, ಮುಸುಕಿನಜೋಳ, ತೋಗರಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು 2 ಸಾವಿರ ಕೋಟಿ ರು. ನೀಡಿ ಖರೀದಿ ಮಾಡಲಾಗಿದೆ ಎಂದು ಹೇಳಿದರು.
ರೈತರು ಕೃಷಿ ಚಟುವಟಿಕೆಯಲ್ಲಿ ಹೆಚ್ಚು ಹೆಚ್ಚು ತೊಡಗಬೇಕು. ಆಗ ಮಾತ್ರ ಕರ್ನಾಟಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯ. ಇದಕ್ಕಾಗಿ ಹೊಸ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವುದರ ಜತೆಗೆ ತಂತ್ರಜ್ಞಾನದ ಉಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಯಾದ ಅನ್ನಭಾಗ್ಯ ಯೋಜನೆಯನ್ನು ಟೀಕೆ ಮಾಡುತ್ತಿದ್ದವರೂ ಈಗ ಸುಮ್ಮನಾಗಿದ್ದಾರೆ. ಪ್ರತಿ ತಿಂಗಳು 1 ಕೋಟಿ 3 ಲಕ್ಷ ಪಡಿತರದಾರರಿಗೆ ಅನ್ನಭಾಗ್ಯ ಯೋಜನೆಯ ಲಾಭ ದೊರಕುತ್ತಿದೆ.
ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್, ಲೋಕೋಪಯೋಗಿ ಸಚಿವ ಮಹದೇವಪ್ಪ,  ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ,  ಡಿ.ಸಿ.ತಮ್ಮಣ್ಣ, ಕೆ.ಎಸ್. ಪುಟ್ಟಣ್ಣಯ್ಯ, ಮರಿತಿಬ್ಬೇಗೌಡ, ಸೋಮಶೇಖರ್, ಮಾಜಿ ಶಾಸಕರಾದ ಎಂ.ಎಸ್.ಆತ್ಮಾನಂದ, ಕಲ್ಪನಾ ಸಿದ್ದರಾಜು, ಕೆ.ಬಿ.ಚಂದ್ರಶೇಖರ್, ಸುರೇಶ್ ಗೌಡ, ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್, ಜಿಪಂ ಸಿಇಒ ಸಿಂಧೂರಿ ಉಪಸ್ಥಿತರಿದ್ದರು.

ಅನ್ನಭಾಗ್ಯ ಯೋಜನೆಗಾಗಿ ಪ್ರತಿ ತಿಂಗಳು 3 ಲಕ್ಷ ಮೆಟ್ರಿಕ್ ಟನ್ ಪಡಿತರ ಪದಾರ್ಥ ಬೇಕು. ಬೆಳೆಗಳಿಗೆ ಬೇಡಿಕೆ ಹೆಚ್ಚಾದಂತೆ ರೈತರಿಗೂ ಉತ್ತೇಜನೆ ಸಿಗುತ್ತದೆ. ರೈತರು ಹೆಚ್ಚು ಬೆಳೆಗಳನ್ನು ಬೆಳೆದರೆ ಉತ್ತಮ ಬೆಲೆಯೂ ದೊರಕುತ್ತದೆ.
ಟಿ ಸಿದ್ದರಾಮಯ್ಯ
ಮುಖ್ಯಮಂತ್ರಿಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com