ಮಂಡ್ಯ: ಮೈಷುಗರ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಮುಂಗಡ ಪಾವತಿ ಹಾಗೂ ಲಾರಿ ಬಾಡಿಗೆ ಹೆಚ್ಚಳ ಸಂಬಂಧ ಕಾರ್ಖಾನೆ ಅಧಿಕಾರಿಗಳು ಹಾಗೂ ಕಬ್ಬು ಒಪ್ಪಿಗೆದಾರರ ರೈತ ಪ್ರತಿನಿಧಿಗಳ ಸಭೆ ನಡೆಯಿತು.
ಸಭೆಯಲ್ಲಿ ಮೈಷುಗರ್ಗೆ ರೈತರು ಸರಬರಾಜು ಮಾಡಿ ಪ್ರತಿ ಟನ್ ಕಬ್ಬಿಗೆ 1000 ರು.ನಂತೆ ಮುಂಗಡ ಪಾವತಿಸುವುದಾಗಿ ಕಾರ್ಖಾನೆ ಆಡಳಿತ ಮಂಡಳಿ ಭರವಸೆ ನೀಡಿತು. ಈ ವೇಳೆ ಕೇವಲ 1 ಸಾವಿರ ರು. ಮುಂಗಡ ಪಾವತಿಸುವ ಆಡಳಿತ ಮಂಡಳಿಯ ನಿಲುವಿಗೆ ರೈತರು ಆಕ್ಷೇಪ ವ್ಯಕ್ತಪಡಿಸಿದರು.
ಮೊದಲು ಕಬ್ಬಿನ ಬೆಲೆ ನಿಗದಿಯಾಗಲಿ. ಅದರಂತೆ ಮುಂಗಡವನ್ನು ನಿಗದಿಪಡಿಸಬೇಕು. ಕಬ್ಬು ಸಾಗಿಸುವ ಲಾರಿಗಳ ಬಾಡಿಗೆ ಮೊತ್ತ ಹೆಚ್ಚಳ ಸಂಬಂಧ ಲಾರಿ ಮಾಲೀಕರು ಹಾಗೂ ರೈತರ ಸಭೆಯನ್ನು ಒಟ್ಟಿಗೆ ಕರೆದು ಚರ್ಚಿಸಿ ಕ್ರಮ ವಹಿಸಬೇಕು. ಬೇರಾವ ಕಾರ್ಖಾನೆಗಳಲ್ಲೂ ಲಾರಿ ಬಾಡಿಗೆ ಮೊತ್ತ ಹೆಚ್ಚಳವಾಗಿಲ್ಲ. ಮೈಷುಗರ್ನಲ್ಲಿ ಮಾತ್ರ ಏಕೆ ಏರಿಕೆ ಮಾಡಬೇಕು ಎಂದು ಎಂದು ರೈತರು ಪ್ರಶ್ನಿಸಿದರು.
ಶೋಷಣೆ ಸರಿ ಅಲ್ಲ: ಬಾಡಿಗೆ ಮೊತ್ತ ಹೆಚ್ಚಿಸುವ ಲಾರಿ ಮಾಲೀಕರ ಸಂಘದ ಮನವಿಯನ್ನು ತಿರಸ್ಕರಿಸಿದ ರೈತ ಸಂಘದ ಅಧ್ಯಕ್ಷ ಕೋಣಸಾಲೆ ನರಸರಾಜು, ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರನ್ನು ಶೋಷಿಸುವುದು ಸರಿಯಲ್ಲ. ಕಬ್ಬು ಬೆಲೆ ನಿಗದಿಯಾಗದ ಹೊರತು ಲಾರಿ ಬಾಡಿಗೆ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದರು.
ಇತರೆ ಕಾರ್ಖಾನೆಗಳಲ್ಲಿ ಲಾರಿ ಬಾಡಿಗೆ ಹೆಚ್ಚಳ ಮಾಡುತ್ತಿಲ್ಲ. ಆದರೆ, ಮೈಷುಗರ್ನಲ್ಲಿ ಏಕೆ ಬಾಡಿಕೆ ಹೆಚ್ಚಳದ ಮಾತನಾಡುತ್ತೀರಿ ಎಂದು ಅನುಮಾನ ವ್ಯಕ್ತಪಡಿಸಿದರು. ಮೊದಲು ಪರ್ಮಿಟ್ ಕೊಟ್ಟು ಕಬ್ಬು ಅರೆಯುವಿಕೆಗೆ ಚಾಲನೆ ಕೊಡಬೇಕು. ನಾವು ಎತ್ತಿನಗಾಡಿ ಮೂಲಕವೇ ಕಬ್ಬು ಪೂರೈಸಲು ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಮೈಷುಗರ್ ಕಾರ್ಖಾನೆಯನಲ್ಲಿ ಲಾರಿ ಬಾಡಿಗೆ ಮೊತ್ತ ಹೆಚ್ಚಿಸಿದರೆ ಇತರ ಕಾರ್ಖಾನೆಗಳ ವ್ಯಾಪ್ತಿಯಲ್ಲೂ ಲಾರಿ ಬಾಡಿಗೆಯನ್ನು ಹೆಚ್ಚು ಕೇಳುತ್ತಾರೆ. ಇದರಿಂದ ರೈತರಿಗೆ ಹೊರೆಯಾಗಲಿದೆ. ಸರಿಯಾದ ಮಳೆ ಬೆಳೆ ಇಲ್ಲದೇ ರೈತರು ಸಂಕಷ್ಟದಲ್ಲಿದ್ದೇವೆ. ಮೊದಲು ಕಬ್ಬಿನ ಬೆಲೆ ನಿಗದಿಯಾಗಲಿ. ನಂತರ ಲಾರಿ ಬಾಡಿಗೆ ಕುರಿತು ಚರ್ಚಿಸೋಣ ಎಂದು ರೈತರು ಸಲಹೆ ನೀಡಿದರು. ಕಾರ್ಖಾನೆಗೆ ಬಂದ ಎಲ್ಲ ಎಂಡಿಗಳು ಅದಷ್ಟು ಬೇಗ ಕೋಜನರೇಷನ್, ಎ ಮಿಲ್ ಪ್ರಾರಂಭಿಸುತ್ತೇವೆ ಎಂದು ಹೇಳುತ್ತಾರೆ. ಆದರೆ, ಆ ವೇಳೆಗೆ ಅವರೇ ಇರುವುದಿಲ್ಲ. ಕಳೆದ 3 ವರ್ಷಗಳಿಂದ ಇದೇ ಸ್ಥಿತಿಯಿದೆ. ಎಂಡಿ ಮಹದೇವು ದೀರ್ಘಕಾಲ ಇದ್ದು, ಕಾರ್ಖಾನೆ ಪುನಃಶ್ಚೇತನಗೊಳಿಸಿ. ಸಹ ವಿದ್ಯುತ್ ಘಟಕ, ಎ ಮಿಲ್ ಆರಂಭಕ್ಕೆ ಕ್ರಮವಹಿಸಿ ಎಂದು ರೈತರು ಒತ್ತಾಯಿಸಿದರು.
9ರಿಂದ ಕಬ್ಬು ಅರೆಯುವಿಕೆ: ಆ.9ರಿಂದ ಕಬ್ಬು ಅರೆಯುವಿಕೆ ಆರಂಭಿಸಲಾಗುವುದು. ಕಾರ್ಖಾನೆ ಅಭಿವೃದ್ಧಿಗೆ ರೈತರು ಸಹಕರಿಸಬೇಕು ಎಂದು ಎಂಡಿ ಡಾ.ಮಹದೇವು ಕೋರಿದರು. ಸಭೆಯಲ್ಲಿ ಮೈಷುಗರ್ ಸಿಇಒ ಪ್ರಕಾಶ್ರಾವ್, ಮೈಷುಗರ್ ಕಬ್ಬು ಅಭಿವೃದ್ಧಿ ಅಧಿಕಾರಿ ಚಿಕ್ಕಲಿಂಗಯ್ಯ, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಶಂಭೂನಹಳ್ಳಿ ಕೃಷ್ಣ, ಕಾರ್ಖಾನೆ ಅಧಿಕಾರಿ ಶಂಕರ್, ರೈತ ಮುಖಂಡರಾದ ಶಂಭೂನಹಳ್ಳಿ ಸುರೇಶ್, ಬೊಮ್ಮೇಗೌಡ, ಮುದ್ದೇಗೌಡ, ಬಳ್ಳಾರಿಗೌಡ, ಮರಿಚನ್ನೇಗೌಡ ಉಪಸ್ಥಿತರಿದ್ದರು.
ಅಂತಿಮ ಬಟವಾಡೆ
ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಆರ್. ಮಹದೇವು ಮಾತನಾಡಿ, ಸರ್ಕಾರ ನಿಗದಿಪಡಿಸುವ ಕಬ್ಬಿನ ದರವನ್ನು ನೀಡಲು ಮೈಷುಗರ್ ಸಿದ್ಧ. ಸದ್ಯಕ್ಕೆ ಕಬ್ಬು ಸರಬರಾಜು ಮಾಡುವ ರೈತರಿಗೆ ಕ್ಷೇತ್ರ ಸಿಬ್ಬಂದಿ ಶಿಫಾರಸಿನ ಆಧಾರದ ಮೇಲೆ ಕಬ್ಬು ಪೂರೈಕೆಯಾದ ಮರುದಿನದಿಂದಲೇ ಪ್ರತಿ ಟನ್ಗೆ 1000 ಮುಂಗಡ ಹಣ ಪಾವತಿಸಲಾಗುವುದು. ತೂಕದ ಟಿಕೆಟ್ಗಳನ್ನು ಸಲ್ಲಿಸಿದ 30 ದಿನಗಳೊಳಗೆ ಅಂತಿಮ ಬಟಾವಡೆ ಮಾಡಲಾಗುವುದು ಎಂದು ತಿಳಿಸಿದರು.
Advertisement