ಮನಬಂದಂತೆ ಲೋಡ್ ಶೆಡ್ಡಿಂಗ್ಗೆ ಬಿಜೆಪಿ ಆಕ್ರೋಶ

Updated on

ಮಳವಳ್ಳಿ: ಮನಬಂದಂತೆ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ತಾಲೂಕಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದಲ್ಲಿ ಬಿಜೆಪಿ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ದಾರಿಯುದ್ದಕ್ಕೂ ರಾಜ್ಯ ಸರ್ಕಾರ ಹಾಗೂ ವಿದ್ಯುತ್ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ ನಂತರ ಚೆಸ್ಕಾಂ ಕಚೇರಿಗೆ ಆಗಮಿಸಿದ ಮುಖಂಡರು ಕೆಲ ಕಾಲ ಧರಣಿ ನಡೆಸಿ ವಿದ್ಯುತ್ ಲೊಡ್ಶೆಡ್ಡಿಂಗ್ ಮಾಡುತ್ತಿರುವ ಅಧಿಕಾರಿಗಳ ಕ್ರಮದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರು ಇತ್ತೀಚಿನ ದಿನಗಳಲ್ಲಿ ಅನಿಯಮಿತವಾಗಿ  ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ರೈತರು ತೀವ್ರ ತೊಂದರೆ ಅನುಭವಿಸುವಂತೆ ಮಾಡಿದ್ದಾರೆ ಎಂದು ದೂರಿದರು. ಜತೆಗೆ ವಿದ್ಯುತ್ ಸರಬರಾಜು ಅವ್ಯವಸ್ಥೆಯಿಂದ ಕೂಡಿದ್ದು ಸಕಾಲಕ್ಕೆ ವಿದ್ಯುತ್ ಪರಿವರ್ತಕಗಳನ್ನು ಟ್ರಾನ್ಸ್ಫಾರ್ಮರ್ಗಳನ್ನು ಒದಗಿಸುತ್ತಿಲ್ಲ ಹಾಗೂ ಕೆಟ್ಟು ಹೋದವನ್ನು ಬದಲಿಸಿ ಸಮಸ್ಯೆಗಳ ಕುರಿತು ಗಮನಹರಿಸುತ್ತಿಲ್ಲ ಹಾಗೂ ತೊಂದರೆಯುಂಟಾದಾಗ ಕರೆ ಮಾಡಿದರೆ ಸಮರ್ಪಕವಾಗಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಎಚ್. ಸವರಾಜು, ಮಾಜಿ ಅಧ್ಯಕ್ಷ ಅಶೋಕ್ಕುಮಾರ್, ಡಾ.ಕಪನೀಗೌಡ, ಮುಖಂಡರಾದ ಕೃಷ್ಣ, ನಾಗೇಗೌಡ, ಮುದ್ದಮಲ್ಲು, ಅಪ್ಪಾಜಿಗೌಡ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸ್ವಾತಂತ್ರ್ಯ ದಿನಾಚರಣೆ ಅದ್ಧೂರಿಗೆ ನಿರ್ಧಾರ
ಪಾಂಡವಪುರ: ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು. ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅಧ್ಯಕ್ಷತೆ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತ ಮಾತೆಯ ಭಾವಚಿತ್ರ ಹಾಗೂ ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರ ಭಾವಚಿತ್ರವನ್ನು ಹೊಂದಿರುವ ಸ್ತಬ್ಧಚಿತ್ರಗಳನ್ನು ರಚಿಸಿ ಮೆರವಣಿಗೆಯಲ್ಲಿ ತರುವಂತೆಯೂ ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಟ ನಡೆಸಿದ ಪಾಂಡವಪುರ ತಾಲೂಕಿನ ಹಲವು ಗಣ್ಯರನ್ನು ಸನ್ಮಾನಿಸಿ ಗೌರವಿಸುವಂತೆಯೇ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಮಿನಿ ವಿಧಾನಸೌಧದ ಬಳಿ ಜಮಾವಣೆಗೊಂಡು ಅಲ್ಲಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ನಂತರ ಪಾಂಡವ ಕ್ರೀಡಾಂಗಣಕ್ಕೆ ಆಗಮಿಸಿ ಅಲ್ಲಿ ಶಾಲಾ-ವಿದ್ಯಾರ್ಥಿಗಳಿಂದ ಪಥ ಸಂಚಲನ, ಬ್ಯಾಂಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತೆಯೂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಡಿ.ದೇವರಾಜು ಅರಸು ಜಯಂತಿ 23ರಂದು
ಪಾಂಡವಪುರ: ಆ. 23ರಂದು ಬೆಳಿಗ್ಗೆ 10 ಗಂಟೆಗೆ ಹಿಂದುಳಿದ ವರ್ಗಗಳ ನಾಯಕ ಡಿ.ದೇವರಾಜು ಅರಸು ಅವರ 99ನೇ ಜಯಂತಿ ಕಾರ್ಯಕ್ರಮವನ್ನು ಪಟ್ಟಣದ ವಿಜಯ ಕಾಲೇಜಿನಲ್ಲಿ ಆಯೋಜಿಸಲು ನಿರ್ಧರಿಸಲಾಯಿತು. ತಾ.ಪಂ ಪ್ರಭಾರ ಅಧ್ಯಕ್ಷ ಯಶ್ವಂತ್, ಜಿ.ಪಂ ಸದಸ್ಯರಾದ ವಸಂತಾಪ್ರಕಾಶ್, ಎ.ಎಲ್.ಕೆಂಪೂಗೌಡ, ತಾ.ಪಂ. ಸದಸ್ಯ ಎಚ್.ಎಂ.ರಾಮಕೃಷ್ಣ, ಪ.ಪಂ ಅಧ್ಯಕ್ಷ ಡಿ.ಶ್ರೀನಿವಾಸ್, ತಹಸೀಲ್ದಾರ್ ಡಿ.ಎಸ್.ಶಿವಕುಮಾರಸ್ವಾಮಿ, ತಾ.ಪಂ ಇಓ ಕೆ.ಬಸವರಾಜು ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಪಿಡಿಓಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com