ಮಂಡ್ಯ: ಗ್ರಾಮೀಣ ಭಾಗದಲ್ಲಿ ಜನರು ಸ್ವಚ್ಛತೆಗೆ ಆದ್ಯತೆ ನೀಡಿ ಮನೆಗೆ ಒಂದು ಶೌಚಾಲಯವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು. ತಾಲೂಕಿನ ಸಂತೆಕಲಸಗೆರೆ ಗ್ರಾಮ ಪಂಚಾಯ್ತಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಬೀದಿ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಕ್ಕಳು ತಮ್ಮ ಮನೆಯಿಂದಲೇ ಸ್ವಚ್ಛತೆಯನ್ನು ರೂಢಿಸಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಯಲ್ಲಿಯೂ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಬಯಲು ಬಹಿರ್ದೆಸೆಯಿಂದ ಆಗುವ ಅನಾನುಕೂಲಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ನಂತರ ಸಮರ್ಪಣ ಸಾಂಸ್ಕೃತಿಕ ಕಲಾ ಬಳಗ ಮತ್ತು ಶಿವಗಂಗಾ ಸಾಂಸ್ಕೃತಿಕ ಕಲಾಬಳಗದ ಕಲಾವಿದರಿಂದ ಶೌಚಾಲಯ ನಿರ್ಮಾಣದಿಂದ ಆಗುವ ಅನುಕೂಲ ಮತ್ತು ಸ್ವಚ್ಛತೆಯ ಬಗ್ಗೆ ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಂತೆಕಸಲಗೆರೆ ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾಗರಾಜ್, ಸದಸ್ಯರಾದ ಭೋಮಿಗೌಡ, ಜಿಲ್ಲಾ ವಾರ್ತಾಧಿಕಾರಿ ಆರ್.ರಾಜು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪಿ.ಶಿವಣ್ಣ, ರಾಜೀವ ಪ್ರಶಸ್ತಿ ವಿಜೇತ ನಟರಾಜ್ ಉಪಸ್ಥಿತರಿದ್ದರು.
Advertisement