ಭಾರತೀನಗರ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ತಿಳಿವಳಿಕೆ ತುಂಬಾ ಅವಶ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ ತಿಳಿಸಿದರು. ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಹಂತದದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ತಿಳಿವಳಿಕೆ ವಿದ್ಯಾರ್ಥಿ ಜೀವನದಲ್ಲಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತುಂಬಾ ಸಹಾಯಕವಾಗಿವೆ. ಪ್ರತಿಯೊಂದಕ್ಕೂ ವಿಜ್ಞಾನ ಅತ್ಯವಶ್ಯಕವಾಗಿದೆ. ಈ ದಿನಕ್ಕೆ ಮಾತ್ರ ವಿಜ್ಞಾನ ವಸ್ತು ಪ್ರದರ್ಶನವನ್ನು ಸೀಮಿತಗೊಳಿಸಬಾರದು. ಅದನ್ನು ಮೈಗೂಡಿಸಿಕೊಳ್ಳಬೇಕು. ಚಿಕ್ಕವಯಸ್ಸಿನಲ್ಲಿಯೇ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿಕೊಂಡಲ್ಲಿ ಮುಂದಿನ ಜೀವನದಲ್ಲಿ ಪ್ರಯೋಜನ ಪಡೆಯಬಹುದೆಂದು ತಿಳಿವಳಿಕೆ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಜ್ಞಾನ ಅತ್ಯವಶ್ಯವಾಗಿದೆ. ಪ್ರೌಢಶಿಕ್ಷಣ ಜೀವನಕ್ಕೆ ಒಂದು ತಿರುವು ನೀಡುವ ಹಂತವಾಗಿದೆ. ಆದ್ದರಿಂದ ಪ್ರೌಢಶಾಲಾ ಮಟ್ಟದಲ್ಲಿಯೇ ಹೆಚ್ಚು ಜ್ಞಾನವನ್ನು ಬೆಳೆಸಿಕೊಂಡರೆ ಮುಂದಿನ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದಾಗಿದೆ ಎಂದರು.
ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸತತ ಮೂರು ವರ್ಷಗಳಿಂದ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಇನ್ಸ್ಪೈರ್ ಅವಾರ್ಡ್ ಪಡೆದಿರುವುದು ಪ್ರಶಂಸನೀಯ. ಇದಕ್ಕೆ ಕಾರಣರಾದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಜಿ.ಟಿ. ರವೀಂದ್ರಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಹಲವಾರು ಪ್ರತಿಭೆಗಳನ್ನು ಒಳಗೊಂಡಿದ್ದರೂ ಭಯದಿಂದ ಅದನ್ನು ಪ್ರದರ್ಶಿಸಲು ಮುಂದೆ ಬರುತ್ತಿಲ್ಲ. ವಿದ್ಯಾರ್ಥಿಗಳು ಯಾವುದೇ ರೀತಿಯ ಭಯಪಡದೆ ಧೈರ್ಯದಿಂದ ಪ್ರಶ್ನಿಸುವ ಮತ್ತು ಉತ್ತರಿಸುವ ಮನೋಭಾವ ಉಳ್ಳವರಾಗಬೇಕೆಂದು ತಿಳಿವಳಿಕೆ ನೀಡಿದರು. ಇದೇ ಸಂದರ್ಭದಲ್ಲಿ ಮುಖ್ಯಶಿಕ್ಷಕ ಎಚ್.ವಿ.ಜಯರಾಮು, ವಿಜ್ಞಾನ ಶಿಕ್ಷಕರಾದ ಸೋಮಸುಂದರ್, ಪುಟ್ಟಸ್ವಾಮಯ್ಯ, ಸಹಶಿಕ್ಷಕ ಜ್ಯೋತಿಶ್ರೀ, ಕುಮಾರ್, ಹಿರಿಯ ಶಿಕ್ಷಕಿ ಸತ್ಯಭಾಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
Advertisement