ಮಂಡ್ಯ: ಸಿನಿಮಾ ನನ್ನ ಬದುಕು. ಕೊನೆಯ ಉಸಿರು ಇರುವವರೆಗೂ ಚಿತ್ರರಂಗದಲ್ಲಿ ದುಡಿದು ಸಾಯುತ್ತೇನೆ ಎಂದು ಹಿರಿಯ ಚಿತ್ರನಟ ದ್ವಾರಕೀಶ್ ಹೇಳಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ನಾಲ್ಕನೇ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ಎಂದೂ ಮರೆಯದ ಹಾಡು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕನ್ನಡ ಮಾಣಿಕ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕಳೆದ 57 ವರ್ಷಗಳಿಂದ ಚಿತ್ರರಂಗದಲ್ಲಿ ಕಾಲ ಕಳೆದಿದ್ದೇನೆ. ಸಿನಿಮಾದಿಂದಲೇ ಉಸಿರಾಡುತ್ತಿದ್ದೇನೆ. ನನ್ನ ಬೆಳವಣಿಗೆಗೆ ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ್, ಹುಣುಸೂರು ಕೃಷ್ಣಮೂರ್ತಿ, ರಜನಿಕಾಂತ್ ಕಾರಣಕರ್ತರಾಗಿದ್ದಾರೆ. ಇನ್ನೂ ಸಿನಿಮಾ ನಿರ್ಮಿಸುವ ಇರಾದೆ ನನ್ನದಾಗಿದ್ದು, ಬದುಕಿನುದ್ದಕ್ಕೂ ಸಿನಿಮಾ ನನ್ನ ಉಸಿರಾಗಿದೆ ಎಂದು ನುಡಿದರು.
ಹಳೆಯ ನೆನಪು ಮೆಲಕು: 1952ರಲ್ಲಿ 80 ಸಾವಿರ ವೆಚ್ಚದಲ್ಲಿ ಮಮತೆಯ ಬಂಧನ ಎಂಬ ಚಿತ್ರ ನಿರ್ಮಿಸಿದೆ. ಆನಂತರ 1.20ಲಕ್ಷ ವೆಚ್ಚದಲ್ಲಿ ಮೇಯರ್ ಮುತ್ತಣ್ಣ ಚಿತ್ರ ನಿರ್ಮಾಣ ಮಾಡಿದೆ. ಅದು 50 ಸಾವಿರ ಆದಾಯ ತಂದಿತು. ಆ ಕಾಲದಲ್ಲಿ ಡಾ.ರಾಜ್ಕುಮಾರ್ ಅವರಿಗೆ ಹತ್ತು ಸಾವಿರ, ಭಾರತಿ ಅವರಿಗೆ ರು. 3 ಸಾವಿರ ಸಂಭಾವನೆ ನೀಡಿದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ದಸರಾ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಕೆ.ಆರ್. ಮೋಹನ್ಕುಮಾರ್ ಅವರಿಗೆ ಕನ್ನಡದ ಮಾಣಿಕ್ಯ ಪ್ರಶಸ್ತಿ ವಿತರಿಸಲಾಯಿತು. ಸಮ್ಮೇಳನಾಧ್ಯಕ್ಷ ಕೃಷ್ಣಸ್ವರ್ಣಸಂದ್ರ ಅವರನ್ನು ವಕ್ಫ್ ಬೋರ್ಡ್ನ ಮಾಜಿ ಅಧ್ಯಕ್ಷ ಅನ್ವರ್ ಮಾಣಿಕ್ ಪಾಡಿ ಅತ್ಮೀಯವಾಗಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ಚಂದ್ರಶೇಖರ್, ಡಾ.ವೆಂಕಟೇಶ್, ಪೈಲ್ವಾನ್ ಮುಕುಂದ, ಸತೀಶ್ ಜವರೇಗೌಡ, ನಟ ಕೆ.ಆರ್.ಪೇಟೆ ಅರವಿಂದ್, ಸುಮಾರಾಜಕುಮಾರ್ ಅವರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಾಸ್ಯ ನಟ ದ್ವಾರಕೀಶ್ ಅವರ ಆಯ್ದ ಚಲನಚಿತ್ರಗಳ ಗೀತೆಗಾಯನ ನೆರೆದಿದ್ದ ಸಾವಿರಾರು ಅಭಿಮಾನಿಗಳ ಗಮನ ಸೆಳೆಯಿತು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ನ ಗೌರವಾಧ್ಯಕ್ಷ ಬಿ.ಸಿ.ಶಿವಾನಂದ ಅಧ್ಯಕ್ಷತೆ ವಹಿಸಿದ್ದರು.
ಪರಿಷತ್ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್.ಅರಸ್, ಕಾಂಗ್ರೆಸ್ ಮುಖಂಡ ಎಚ್.ಪಿ. ಮಹೇಶ್, ಜಿಲ್ಲಾಧ್ಯಕ್ಷ ಜಿ.ವಿ. ನಾಗರಾಜು, ಉಪಾಧ್ಯಕ್ಷ ಶಿವಪ್ರಕಾಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.
Advertisement