ಕ.ಪ್ರ.ವಾರ್ತೆ ರಾವಂದೂರು ಆ. 14
2013- 14ನೇ ಸಾಲಿಗೆ ರಾವಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1.5 ಕೋಟಿಗಳಿಗೂ ಮೀರಿದ ವ್ಯವಹಾರ ನಡೆಸಿ 4.56 ಲಕ್ಷ ಲಾಭದಲ್ಲಿ ಮುನ್ನಡೆದಿದೆ ಎಂದು ಸಂಘದ ಕಾರ್ಯ ನಿರ್ವಹಣಾಧಿಕಾರಿ ಆರ್.ಎ. ವಿಜಯೇಂದ್ರ ಹೇಳಿದರು.
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಹಕಾರ ಸಂಘಗಳಲ್ಲಿ ಸಾಲ ಪಡೆಯುವುದಷ್ಟೆ ಉದ್ದೇಶವಾಗಬಾರದು. ಪಡೆದ ಸಾಲವನ್ನು ಸರಿಯಾದ ಸಮಯದಲ್ಲಿ ಪಾವತಿಸಿ ಇಲಾಖೆಯಿಂದ ದೊರೆಯುವ ಸಹಾಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಸಹಕಾರ ಸಂಘದ ಅಧ್ಯಕ್ಷ ಸಂಪತ್ ಮಾತನಾಡಿ, ಸರ್ಕಾರದ ಸಾಲ ಮನ್ನಾ ಯೋಜನೆಯಡಿಯಲ್ಲಿ ಸಂಘದ 189 ರೈತರಿಗೆ ತಲಾ 25 ಸಾವಿರ ಸಾಲ ಮನ್ನಾ ಆಗಿದ್ದು, ಸರ್ಕಾರದಿಂದ ಸಂಘಕ್ಕೆ ಇದು ಪಾವತಿಯಾದ ತಕ್ಷಣ ಇದು ರೈತರಿಗೆ ಜಮಾ ಆಗಲಿದೆ ಎಂದು ತಿಳಿಸಿದರು. ಕಳೆದ ವರ್ಷ 1,15 ಕೋಟಿ ಸಾಲ ನೀಡಲಾಗಿತ್ತು, ಈ ಬಾರಿ ಅದನ್ನು ಇನ್ನೂ ಹೆಚ್ಚು ಮಾಡಲಾಗಿದೆ ಎಂದು ತಿಳಿಸಿದರು. ಸಾಲ ಪಡೆಯುವ ಪ್ರತಿಯೊಬ್ಬ ರೈತರಿಗೆ ಒಂದು ಲಕ್ಷದವರೆಗೆ ಒಂದು ರು. ಬಡ್ಡಿಯಂತೆ ಸಾಲ ನೀಡುತ್ತಿದ್ದು, ವಾಣಿಜ್ಯ ಬ್ಯಾಂಕ್‌ಗಳಿಗಿಂತ ಇದು ರೈತರಿಗೆ ಉಪಯೋಗವಾಗುತ್ತಿದ್ದು, ಕಾಲ ಕಾಲಕ್ಕೆ ಸರ್ಕಾರದಿಂದ ದೊರೆಯುವ ಇಂತಹ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದುವಂತೆ ಹೇಳಿದರು.
ನಿರ್ದೇಶಕರಾದ ಸುಮಿತ್ರಮ್ಮ, ಕೆ. ಮಲ್ಲೇಶ್, ಸಯ್ಯದ್ ಅಬ್ಬಸ್, ಸಾದಿಕ್‌ಉಲ್ಲಾ, ಹುಚ್ಚಯ್ಯ, ಸಾವಿತ್ರಮ್ಮ, ತಾಪಂ ಸದಸ್ಯ ಆರ್.ಸಿ. ಚಂದ್ರು, ಹಿರಿಯ ಸದಸ್ಯರಾದ ಪುಟ್ಟೇಗೌಡ, ಕುಮಾರ, ನಾಗರಾಜು, ಶಿವದೇವ್, ಸುಮನ್‌ಕುಮಾರ್, ಪುಟ್ಟಸ್ವಾಮಿ ಇದ್ದರು.
Advertisement