ಯದುವಂಶಸ್ಥರೇ ಒಡೆಯರಾದರು

Updated on

ಮೈಸೂರು: ಮೈಸೂರು ಎಂದ ಕೂಡಲೇ ಎಲ್ಲರಿಗೂ ನೆನಪಾಗುವುದು ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ. ಈ ಅರಮನೆಯ ಹಿಂದೆ ಯದುವಂಶದ ಒಡೆಯರ್ ರಾಜಮನೆತನದ ಇತಿಹಾಸ ಅಡಗಿದೆ. ಯದುವಂಶದ ಹಿನ್ನೆಲೆ, ಯದುವಂಶದ ರಾಜರು ಒಡೆಯರ್ ಆಗಿದ್ದು, ನಂತರ ದಿನಗಳಲ್ಲಿ ಜನ ಮೈಸೂರು ಒಡೆಯರ್ ಎಂದು ಕರೆದಿದ್ದು ಸಹ ಈಗ ಚರಿತ್ರೆ ಆಗಿದೆ. ಯದುವಂಶ, ಒಡೆಯರ್ ಪರಂಪರೆ ಕುರಿತ ಮಾಹಿತಿಗಳು ಇಲ್ಲಿವೆ...
ಮಾದರಿ ಸಂಸ್ಥಾನ
ಐವತ್ತು ವರ್ಷಗಳ ನಿವಾಸಿ ಪ್ರಭುತ್ವದ ನಂತರ ರಾಜ್ಯ ಮತ್ತೆ ಮೈಸೂರು ರಾಜರಿಗೆ ಹಸ್ತಾಂತರವಾಯಿತು. ಆಗ ಪಟ್ಟಕ್ಕೆ ಬಂದ ಒಂಬತ್ತನೆಯ ಚಾಮರಾಜ ಒಡೆಯರು ಜನೋಪಯೋಗಿ ಕಾರ್ಯಗಳನ್ನೂ, ರಾಜಕೀಯ ಸಂಸ್ಥೆಗಳನ್ನೂ ಪ್ರಾರಂಭಿಸಿದರು. ಆಡಳಿತ, ವಿದ್ಯಾಭ್ಯಾಸ, ಆರೋಗ್ಯ ಇತ್ಯಾದಿ ವಿಭಾಗ ಬೆಳೆಸಿ ಮಾದರಿ ಸಂಸ್ಥಾನವಾಗುವಂತೆ ಮಾಡಿದರು.
ಯದುವಂಶ-ಯದುರಾಯ
ಯದುವಂಶದ ಮೊದಲ ಇತಿಹಾಸ ಅಸ್ಪಷ್ಟ. ಇದರ ಸಂಸ್ಥಾಪಕರಾದ ಯದುರಾಯ ಸೋದರ ಕೃಷ್ಣರಾಯನೊಡನೆ ದ್ವಾರಕೆಯಿಂದ ಇಲ್ಲಿಗೆ ಬಂದು ನೆಲೆಸಿದರೆಂಬ ಐತಿಹ್ಯವಿದೆ. ಆದರೆ ಶಾಸನಗಳಲ್ಲಿ ಇದರ ಪ್ರಸ್ತಾಪವಿಲ್ಲ. ಆದ್ಯನಾದ ಯದುರಾಯ (ಸು. 1399-1423) ಸುಸಂದರ್ಭವೊದಗಿದಾಗ, ಮೈಸೂರಿನ ಆಗ್ನೇಯದಲ್ಲಿರುವ ಹದಿನಾಡು (ನಂಜನಗೂಡು ತಾಲೂಕು ಹದಿನಾರು) ಮತ್ತು ಕಾರುಗಹಳ್ಳಿಗಳ ಪಾಳೆಯಪಟ್ಟಿನ ಅಧಿಪತ್ಯ ಸಾಧಿಸಿಕೊಂಡಿರಬೇಕು.
ಈ ಸಂದರ್ಭದಲ್ಲಿ ಜಂಗಮನೊಬ್ಬ ಸಹಕರಿಸಿದನೆಂದೂ ಅವನ ಮೇಲಿನ ಗೌರವದಿಂದ ತಮ್ಮ ಹೆಸರಿನೊಡನೆ ಮೈಸೂರು ಅರಸರು ಒಡೆಯರು ಎಂಬ ಹೆಸರನ್ನು ಸೇರಿಸಿಕೊಳ್ಳುವ ಪರಿಪಾಠ ಬೆಳೆಯಿತೆಂಬ ಪ್ರತೀತಿ ಇದೆ. ಮುಂದಿನ ಅರಸರೆಲ್ಲ ಈ ಒಡೆಯರು ಎಂಬ ಕುಲನಾಮವನ್ನು ಬಳಸಿದರು.
ಯದುರಾಯನ ಅನಂತರ ಚಾಮರಾಜ (1423- 59), ತಿಮ್ಮರಾಜ- (1459- 78), ಹಿರಿಯ ಚಾಮರಾಜ (1478- 1513), ಹಿರಿಯ ಬೆಟ್ಟದ ಚಾಮರಾಜ- (1513- 53), ಈ ಪುತ್ರ ಪರಂಪರೆಯಲ್ಲಿ ಕ್ರಮವಾಗಿ ಆಳಿದರು. ಮೂರನೆಯ ಚಾಮರಾಜನ ಮಗ ಎರಡನೆಯ ತಿಮ್ಮರಾಜ (1553-72) ಪಾಳೆಯಗಾರರನ್ನು ಗೆದ್ದು ಬಿರುದೆಂತೆಂಬರಗಂಡ ಎಂಬ ಬಿರುದನ್ನು ಪಡೆದುಕೊಂಡ. ನಂತರ ಆತನ ಕಿರಿಯ ತಮ್ಮ ಬೋಳ ಚಾಮರಾಜ (1572-76) ಪಟ್ಟಕ್ಕೆ ಬಂದು ವೆಂಕಟಾದ್ರಿ ನಾಯಕನನ್ನು ಜಯಿಸಿ ಅವನು ಬಳಸುತ್ತಿದ್ದ ಸುಗುಣ ಗಂಭೀರ ಎಂಬ ಬಿರುದನ್ನು ತಾನೇ ಧರಿಸಿದ. ಆತನ ಅಣ್ಣ ಕೃಷ್ಣರಾಜನ ಮಗ ಬೆಟ್ಟದ ದೇವರಾಜ (1576-78) ಕೆಲಕಾಲ ಆಳಿ ವಿರಕ್ತನಾಗಿ ತಮ್ಮನಾದ ರಾಜ ಒಡೆಯನಿಗೆ ಮೈಸೂರಿನಲ್ಲಿ ಪಟ್ಟಾಭಿಷೇಕ ಮಾಡಿಸಿದ.
ಒಡೆಯರ ಆಳ್ವಿಕೆ.....
ಒಡೆಯರ ವಂಶದ ಚರಿತ್ರೆ ಸ್ಪಷ್ಟವಾಗಿ ಪ್ರಾರಂಭವಾಗುವುದು ಈ ಕಾಲದಲ್ಲಿ. ಕೇವಲ 33 ಹಳ್ಳಿಗಳನ್ನು ಹೊಂದಿದ್ದ ಮೈಸೂರು ಪಾಳೆಯಪಟ್ಟವನ್ನು ದೊಡ್ಡ ರಾಜ್ಯವಾಗಿ ವಿಸ್ತರಿಸಿದವನು ರಾಜ ಒಡೆಯರ್ (1578-1617). ಶ್ರೀರಂಗಪಟ್ಟಣದಲ್ಲಿ ಆಳುತ್ತಿದ್ದ ವಿಜಯನಗರದ ಪ್ರತಿನಿಧಿ ತಿರುಮಲರಾಯನಿಗೂ ವಿಜಯನಗರದ ಅರಸು ವೆಂಕಟನಿಗೂ ವೈಮನಸ್ಯವಿದ್ದ ಸಂದರ್ಭದಲ್ಲಿ, ರಾಜ ಒಡೆಯರ್ ತಿರುಮಲನನ್ನು ಅಲಕ್ಷಿಸಿ ಮೈಸೂರಿನಲ್ಲಿ ಕೋಟೆಯನ್ನು ಕಟ್ಟಿಕೊಂಡು ಸುತ್ತಮುತ್ತಲಿನ ಪ್ರದೇಶಗಳನ್ನು ಗೆದ್ದುಕೊಂಡ. ಕೊನೆಗೆ ತಿರುಮಲನನ್ನೂ ಎದುರಿಸಿ ಶ್ರೀರಂಗಪಟ್ಟಣ ವಶಪಡಿಸಿಕೊಂಡು ಅರಸನಾದ. ವೆಂಕಟನ ಒಪ್ಪಿಗೆ ಪಡೆದು ಸ್ವತಃ ಈ ಭಾಗದಲ್ಲಿ ವಿಜಯನಗರದ ಪ್ರತಿನಿಧಿಯಾದ. ವೆಂಕಟ ಮೈಸೂರಿನ ಸಮೀಪದ ಕೆಲವು ಭಾಗಗಳನ್ನು ಅನೇಕ ಚಿಕ್ಕಪುಟ್ಟ ಪಾಳೆಯಪಟ್ಟುಗಳನ್ನೆಲ್ಲ ಸದೆಬಡಿದ. ಶ್ರೀರಂಗಪಟ್ಟಣ ಮತ್ತು ಸುಮಾರು ಇಂದಿನ ಇಡೀ ಮೈಸೂರು ಜಿಲ್ಲೆ ಇವನ ವಶಕ್ಕೆ ಬಂದಿತು.
ನಾಲ್ವಡಿ ಕೃಷ್ಣರಾಜ ಒಡೆಯರ್
ಒಂಬತ್ತನೆಯ ಚಾಮರಾಜ ಒಡೆಯರ್ ಹಿರಿಯ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್ (1902-1940) ಪಟ್ಟಕ್ಕೆ ಬಂದರು. ಇವರು ಸಂಸ್ಥಾನದ ಸ್ಥಿತಿಯನ್ನು ಉತ್ತಮಪಡಿಸುವ ಹಲವಾರು ಕ್ರಮಗಳನ್ನು ಕೈಗೊಂಡರು. ಕನ್ನಂಬಾಡಿ ಕಟ್ಟೆ, ಭದ್ರಾವತಿಯ ಕಬ್ಬಿಣದ ಕಾರ್ಖಾನೆ, ಶಿವನಸಮುದ್ರದ ವಿದ್ಯುತ್ ಯೋಜನೆ ಮುಂತಾದ ಉಪಯೋಗಿ ಕಾರ್ಯಗಳನ್ನು ಕೈಗೊಂಡರು. ಮೈಸೂರು ವಿಶ್ವವಿದ್ಯಾಲಯ ಸ್ಥಾಪಿಸಿದರು. ಸ್ಥಳೀಯ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿದರು. ಪ್ರಜಾಪ್ರತಿನಿಧಿ ಸಭೆ ಪರಿಷ್ಕರಣೆ ಸೇರಿದಂತೆ ಹಲವಾರು ಲೋಕೋಪಯೋಗಿ ಕಾರ್ಯಗಳನ್ನು ಕೈಗೊಂಡು ಜನಪ್ರಿಯರಾದರು. ಈ ಸಾಧನೆಗಳಿಗೆ ಸಮರ್ಥರಾದ ಪಿ.ಎನ್. ಕೃಷ್ಣಮೂರ್ತಿ, ಕಾಂತರಾಜ ಅರಸು, ಸರ್.ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ದಿವಾನರುಗಳ ಸೇವೆಯೂ ಪ್ರಮುಖವಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ ನಿಧನದ ನಂತರ ಯುವರಾಜ ಕಂಠೀರವ ನರಸರಾಜ ಒಡೆಯರ ಪುತ್ರ ಜಯಚಾಮರಾಜ ಒಡೆಯರ್ ಪಟ್ಟಕ್ಕೆ (8-9-1940) ಬಂದರು. 1947ರಲ್ಲಿ ಭಾರತ ಸ್ವಾತಂತ್ರ್ಯ ಗಳಿಸಿದ ಮೇಲೆ ಮೈಸೂರು ಸಂಸ್ಥಾನ ಇದರ ಕಕ್ಷೆಯಲ್ಲಿರುವಂತೆ 1948 ರಲ್ಲಿ ಒಪ್ಪಂದ ಮಾಡಿಕೊಂಡರು. ಭಾರತ ಗಣರಾಜ್ಯವಾಗುವ ತನಕ (1950 ಜನವರಿ 26) ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದರು. ಇಲ್ಲಿಗೆ ಮೈಸೂರು ರಾಜತ್ವ ಕೊನೆಗೊಂಡಿತು.ನಂತರ ವರ್ಷಗಳಲ್ಲಿ ಜಯಚಾ ಮರಾಜ ಒಡೆಯರ್ ಪುತ್ರರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಮೈಸೂರು ಅರಮನೆಯಲ್ಲಿ ದಸರಾ ಮಹೋತ್ಸವದಲ್ಲಿ ಖಾಸಗಿ ದರ್ಬಾರ್ ನಡೆಸಿಕೊಂಡು ಬರುತ್ತಿದ್ದರು.
ಆಳ್ವಿಕೆ ನಡೆಸಿದ ರಾಜರು...
ಚಾಮರಾಜ ಒಡೆಯರ ಕಾಲ 1617-37  
ಇಮ್ಮಡಿ ರಾಜ ಒಡೆಯರ್ ಕಾಲ 1637- 38
ರಣಧೀರ ಕಂಠೀರವ ನರಸರಾಜ ಒಡೆಯರ್ ಕಾಲ 1638- 59
ದೇವರಾಜ ಒಡೆಯರ್ ಕಾಲ 1659- 73
ಚಿಕ್ಕದೇವರಾಜ ಒಡೆಯರ್ ಕಾಲ 1673-1704
ಇಮ್ಮಡಿ ಕಂಠೀರವ ನರಸರಾಜರ ಕಾಲ 1704- 14
ದೊಡ್ಡ ಕೃಷ್ಣರಾಜ (ಕೃಷ್ಣರಾಜ ಒಡೆಯರ್)1714- 32
ಇಮ್ಮಡಿ ಕೃಷ್ಣರಾಜ 1734- 66



-ಬಿ. ಶೇಖರ್ ಗೋಪಿನಾಥಂ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com