ರಸ್ತೆ ನಿಯಮ ಪಾಲನೆಯಾಗಲಿ

Updated on

ಮೈಸೂರಿನ ರೇಲ್ವೆ ಕೆಳ ಸೇತುವೆಯಿಂದ ಅಪೊಲೋ ಆಸ್ಪತ್ರೆ ಹೋಗುವ ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿ ನಡೆದಾಡಲು ಹಾಗೂ ವಾಹನದಲ್ಲಿ ಹೋಗುವುದಕ್ಕೆ ಸಾಹಸಮಯವಾಗಿದೆ. ಇಲ್ಲಿ ವಾಹನ ನಿಲುಗಡೆಯ ನಿಯಮಗಳು ಇದ್ದರೂ, ಅದನ್ನು ಯಾರೂ ಪಾಲಿಸುತ್ತಿಲ್ಲ, ಅಡ್ಡಾದಿಡ್ಡಿಯಾಗಿ, ರಸ್ತೆಯ ಎರಡು ಬದಿಗಳಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳು ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ಸಂಚಕಾರವಾಗಿದೆ. ಜನರ ನಿರ್ಲಕ್ಷ್ಯವು ವಾಹನ ನಿಲುಗಡೆಗಾಗಿಯೇ ನೆಟ್ಟಿರುವ ಸೂಚಲ ಫಲಕಗಳನ್ನು ಅಣಕಿಸುವಂತಿದೆ. ಸಂಚಾರಿ ಪೊಲೀಸರು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಹಾಲಿ ಇರುವ ಸಮಸ್ಯೆ ಬಗೆಹರಿಸಿ, ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವರೇ?
ಟಿ ಎನ್.ಡಿ. ಕಾರಂತ, ಶಾರದಾದೇವಿ ನಗರ
 
ಸಮಾಧಿ  ಸ್ಥಳ ಅಭಿವೃದ್ಧಿ ಪಡಿಸಿ
ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಅಂತ್ಯಕ್ರಿಯೆ ನಡೆದ ಮಧುವನದಲ್ಲಿ ಜೆಸಿಬಿಯಿಂದ ತರಾತುರಿಯಲ್ಲಿ ಸ್ವಚ್ಛಗೊಳಿಸಿರುವುದು ಗೋಚರಿಸುತ್ತದೆ.  ಕರ್ನಾಟಕ ವೈಭವೀಕರಿಸಿದ ರಾಜರ ಸಮಾಧಿಗಳು ಯಾವ ಮಟ್ಟದಲ್ಲಿವೆ ಎಂದು ನಮ್ಮ ರಾಜಕಾರಣಿಗಳಿಗೆ ಕಾಣಿಸುತ್ತಲ್ಲವೆ? ಸಿನಿಮಾ ನಟರುಗಳ ಸಮಾಧಿಗಳಿಗೆ ಸಾವಿರಾರು  ಕೋಟಿ ರುಪಾಯಿ ಸರಾಗವಾಗಿ ನೀಡಿ ಅಭಿವೃದ್ಧಿ ಪಡಿಸುವ ಸರ್ಕಾರ ರಾಜರ ಸ್ಮಾರಕಗಳನ್ನು ನಿರ್ಮಿಸಲು ನಿರ್ಲಕ್ಷಿಸುತ್ತಿರುವುದೇಕೆ? ಯಾವ  ಸರ್ಕಾರವೇ ಬರಲಿ ಅಭಿವೃದ್ಧಿಯಾಗಿರುವ ಮಠ ಮತ್ತಿತರ ಸಂಸ್ಥೆಗಳಿಗೆ ಪ್ರತಿ ವರ್ಷ ದೇಣಿಗೆ ನೀಡುತ್ತದೆ. ಆಳ್ವಿಕೆ ನಡೆಸಿ ಮರೆಯಾಗಿರುವ ಮಹಾರಾಜರ ಸಮಾಧಿ  ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲು ಯಾಕೆ ಮುಂದಾಗುತ್ತಿಲ್ಲ. ಇನ್ನಾದರೂ ಸರ್ಕಾರವು ಇತ್ತ ಗಮನ ಹರಿಸಿ ರಾಜರ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿ ಸಂಘವು  ಚುನಾವಣೆಯಲ್ಲಿ  ಯಾವ ಪಕ್ಷದವರಿಗೂ ಮತ ಹಾಕದಿರಲು ನಿರ್ಧರಿಸಿದ್ದೇವೆ.
ಟಿ ಗಜೇಂದ್ರ, ಅಧ್ಯಕ್ಷರು,
ವಿನಾಯಕ ಗೆಳೆಯರ ಬಳಗ, ಎನ್.ಆರ್. ಮೊಹಲ್ಲಾ

ನೋಟು ಬದಲಾವಣೆಗೆ ಕಾಲಾವಕಾಶ ನೀಡಿ
ನೋಟುಗಳ ಮೇಲೆ ಯಾವುದೇ ಬರವಣಿಗೆ ಇದ್ದಲ್ಲಿ ಅಂತಹ ನೋಟುಗಳು 2014ರ ಜ. 1ರಿಂದ ಚಲಾವಣೆಯಾಗುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಪ್ರಕಟಣೆ ಹೊರಡಿಸಿದೆ ಎಂದು ಹೇಳಲಾಗುತ್ತಿದೆ. ರಿಸರ್ವ್ ಬ್ಯಾಂಕ್ ನೋಟು ಚಲಾವಣೆ ಬಗ್ಗೆ ಕಾಲಮಿತಿ ನಿಗದಿಪಡಿಸಿ ಹೊರಡಿಸಿರುವ ಪ್ರಕಟಣೆ ಎಷ್ಟು ಸಮಂಜಸವಾಗುತ್ತದೆ? ಎಷ್ಟು ಜನಕ್ಕೆ ಈ ಬಗ್ಗೆ ಮಾಹಿತಿ ಇದೆ ಬರವಣಿಗೆಯುಳ್ಳ ನೋಟುಗಳಿಗೆ ಮಾನ್ಯತೆ ಇಲ್ಲವೆಂದರೆ ಅಂತಹ ನೋಟುಗಳನ್ನು ಹೊಂದಿರುವ ದೇಶದ ಜನತೆಯ ಪಾಡೇನು? ಆ ನೋಟುಗಳನ್ನು ಏನು ಮಾಡಬೇಕು ಇಂತಹ ಪ್ರಕಟಣೆಯನ್ನು ಜಾರಿ ಮಾಡುವ ಮುನ್ನ ಈ ಬಗ್ಗೆ ವ್ಯಾಪಕ ಪ್ರಚಾರ ಮಾಡಿ, ಜನತೆಗೆ ಸಾಕಷ್ಟು ತಿಳುವಳಿಕೆ ನೀಡಿ, ಬರವಣಿಗೆಯುಳ್ಳ ನೋಟುಗಳನ್ನು ಹಿಂದಕ್ಕೆ ಪಡೆಯಲು ವ್ಯವಸ್ಥೆ ಮಾಡಿ, ಅದಕ್ಕೆ ಸಾಕಷ್ಟು ಕಾಲಾವಕಾಶ ನೀಡಿ, ಕ್ರಮೇಣ ಇದನ್ನು ಜಾರಿಗೆ ತರುವುದು ಸಮಂಜಸವೆನಿಸುತ್ತದೆ.
ಟಿ ಆರ್. ಚಂದ್ರಶೇಖರ್, ದೇವರಾಜ ಮೊಹಲ್ಲಾ.

ಸಮುದಾಯ ಭವನ, ಆಟದ ಮೈದಾನ ನಿರ್ಮಿಸಿ
ಎನ್.ಆರ್. ಕ್ಷೇತ್ರದ ರಾಜೀವ್ ನಗರ ಬಡಾವಣೆಯು ಅತ್ಯಂತ ಹಳಯ ಬಡಾವಣೆಯಾಗಿದ್ದು, ಮಾಜಿ ಪ್ರಧಾನಿ ದಿ. ರಾಜೀವ್ಗಾಂಧಿ ಅವರ ಸ್ಮರಣಾರ್ಥ ನಿರ್ಮಿಸಿರುವ ಈ ಬಡಾವಣೆ ಅಂದಿನಿಂದಲೂ ಅಭಿವೃದ್ಧಿ ಕಾಣದೆ ಹಾಗೆಯೇ ಉಳಿದಿದೆ. ಈ ಬಡಾವಣೆ ನಿರ್ಮಾಣಗೊಂಡು ವರ್ಷಗಳೇ ಕಳೆದರೂ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ. ಆದ್ದರಿಂದ ಶಾಸಕರು ಹಾಗೂ ಸಂಸದರ ತಮ್ಮ ಅನುದಾನದಲ್ಲಿ ಈ ಬಡಾವಣೆಗೆ ಕೂಡಲೆ ಸಮುದಾಯ ಭವನ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ವಾಚನಾಲಯ, ಆಟದ ಮೈದಾನ, ಪ್ರೌಢಶಾಲೆ, ಮಹಿಳೆಯರ ಪಿ.ಯು ಕಾಲೇಜು ಮುಂತಾದ ಸೌಲಭ್ಯ ಕಲ್ಪಿಸಬೇಕು.
ಟಿ ಅಲ್ಲಾಭಕ್ಷ್, ರಿಯಾಜ್ ಖಾನ್, ಖದೀರ್ ಅಹಮದ್,
ಡಿಸಿಸಿ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು.

ಎಲ್ಲ ವಯೋವೃದ್ದರಿಗೂ ಅವಕಾಶ ಕಲ್ಪಿಸಿ
ಪಿಂಚಣಿ ಪಡೆಯುವ 65 ವರ್ಷದಿಂದ 60 ವರ್ಷಕ್ಕೆ ಇಳಿಸಿ ಹಾಗೂ ಪಿಂಚಣಿ ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯವನ್ನು ರದ್ದುಗೊಳಿಸಿ ಎಲ್ಲ ವಯೋವೃದ್ಧರಿಗೂ ಅವಕಾಶ ಕಲ್ಪಿಸಿ ಕೊಡುವುದರಿಂದ ಆರ್ಥಿಕವಾಗಿ ಹಿಂದುಳಿದವರಿಗೆ ನೆಮ್ಮದಿಯಾಗಿ ಜೀವನ ಮಾಡಲು ಹಾಗೂ 60 ವರ್ಷ ಆದ ಮೇಲೆ ಕೆಲಸ ಮಾಡಲು ಶಕ್ತಿ ಇರುವುದಿಲ್ಲ. ಆದ್ದರಿಂದ ಸರ್ಕಾರದ ವತಿಯಿಂದ ನೀಡುವ ಪಿಂಚಣಿ ಸೌಲಭ್ಯವನ್ನು 60 ಇಳಿಸಿ, ಎಲ್ಲ ನಾಗರಿಕರಿಗೂ ಸೌಲಭ್ಯ ದೊರಿಸಿಕೊಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ.
ಟಿ ಕೆ.ಬಿ. ಬಾಬು, ಕೆ.ಬಿ. ಸೋಮಶೇಖರ್, ನಜರ್ಬಾದ್.

ಸಚಿವರ ಕ್ಷೇತ್ರದಲ್ಲೇ ಗ್ರಾಪಂ ಕಟ್ಟಡ ಇಲ್ಲ
ಟಿ. ನರಸೀಪುರ ತಾಲೂಕು ಬನ್ನೂರು ಹೋಬಳಿ ತುರುಗನೂರು ಗ್ರಾಮದಲ್ಲಿ ಗ್ರಾಪಂನ ಶಿಥಿಲಗೊಂಡ ಹಳೇ ಕಟ್ಟ ಕೆಡವಿ, ಅದೇ ಜಾಗದಲ್ಲಿ ನರೇಗಾ ಯೋಜನೆಯಡಿಯಲ್ಲಿ ರಾಜೀವ್ಗಾಂಧಿ ಮಾಹಿತಿ ಕೇಂದ್ರ ಮತ್ತು ಗ್ರಾಪಂ ಕಟ್ಟಡ ನಿರ್ಮಿಸುವ ಸಲುವಾಗಿ ಅಂದಾಜು ವೆಚ್ಚ ರು. 10 ಲಕ್ಷ ಅನುದಾನದಲ್ಲಿ ಕಟ್ಟಡ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿ ಪ್ರಾರಂಭಿಸಲಾಯಿತು. ಈ ಕಾಮಗಾರಿ ಅಡಿಪಾಯದ ಹಂತದವರೆಗೆ ಮುಗಿದು, ಸ್ಥಗಿತಗೊಂಡಿದೆ. ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಕಾಮಗಾರಿ ಪೂರ್ಣಗೊಂಡಿಲ್ಲ. ಕ್ಷೇತ್ರ ಪ್ರತಿನಿಧಿಸುವ ಸಚಿವ ಡಾ.ಎಚ್.ಸಿ. ಮಹದೇವಪ್ಪ ಇತ್ತ ಗಮನ ಹರಿಸಿ, ಗ್ರಾಪಂ ಕಟ್ಟಡ ಕಟ್ಟಲು ಅಧಿಕಾರಿಗಳಿಗೆ ಸೂಚಿಸುವಂತೆ ಒತ್ತಾಯ.
ಟಿ ಹೇಮಾವತಿ ಸ್ವಸಹಾಯ ಸಂಘ, ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಗೂ ತುರುಗುನೂರು ಗ್ರಾಮಸ್ಥರು.

ದೇವರಾಜ ಪೊಲೀಸ್ ಠಾಣೆ ವರ್ಗಾಯಿಸಿ
ಮೈಸೂರಿನ ದೇವರಾಜ ಪೊಲೀಸ್ ಠಾಣೆಯು ಧನ್ವಂತ್ರಿ ರಸ್ತೆಯಲ್ಲಿರುವ ಕೆ.ಆರ್. ಆಸ್ಪತ್ರಯ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಆಸ್ಪತ್ರೆಯವರು ಜಾಗವನ್ನು ಬಿಟ್ಟುಕೊಡುವಂತೆ ಹಲವಾರು ವರ್ಷಗಳಿಂದ ಒತ್ತಾಸುತ್ತಿದ್ದು, ಈಗ ಈ ಆಸ್ಪತ್ರೆಯನ್ನು ವಿಸ್ತಾರಗೊಳಿಸಲು ಜಾಗ ಬಿಟ್ಟುಕೊಡುವಂತೆ ಒತ್ತಾಯ ಜಾಸ್ತಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಮೇಲ್ಕಂಡ ಜಾಗದಲ್ಲಿ ಸ್ವಂತ ಕಟ್ಟಡ ನಿರ್ಮಿಸಬೇಕೆಂದು ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರಲ್ಲಿ ಒತ್ತಾಯ.
ಟಿ ಎನ್. ಲಕ್ಷ್ಮಣ್,  ಮಾಜಿ ಉಪ ಮೇಯರ್

ಮೊಬೈಲ್ ಟವರ್ಗೆ ತಡೆ ಹಾಕಿ
ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ಅಳವಡಿಸುವುದರಿಂದ ಹೊರಸೂಸುವ ವಿಕಿರಣ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಇತ್ತೀಚೆಗೆ ಬೆಳಗಾವಿಯ ವಿಧಾನಸಭೆಯ ಅಧಿವೇಶನದಲ್ಲಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಈ ಕುರಿತು ಪ್ರಸ್ತಾಪಿಸಿದ್ದಾರೆ. ನಗರಪಾಲಿಕೆ ವಲಯ ಕಚೇರಿ-9ರ ವ್ಯಾಪ್ತಿಯ ಸಾತಗಳ್ಳಿ ಲೇಔಟ್, ಡಾ. ರಾಜ್ಕಮಾರ್ರಸ್ತೆ, ಕೆಇಬಿ ಹತ್ತಿರ, ಮನೆಯ ಮೇಲ್ಭಾಗಲ್ಲಿ ಖಾಸಗಿ ಮೊಬ್ ಟವರ್ ಕೆಲಸವು ನಿರಂತರವಾಗಿ ನಡೆಯುತ್ತಿದೆ. ಈ ಕುರಿತು ಬಡಾವಣೆಯ ನಿವಾಸಿಗಳು ಜಿಲ್ಲಾಧಿಕಾರಿಗಳು ಮತ್ತು ನಗರಪಾಲಿಕೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರೂ ಯಾವುದು ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಕೂಡಲೆ ಮೊಬೈಲ್ ಟವರ್ ಕೆಲಸವನ್ನು ಶಾಶ್ವತವಾಗಿ ತಡೆಹಾಕಿ ಬಡಾವಣೆಯ ನಾಗರಿಕರಿಗೆ ನ್ಯಾಯ ಒದಗಿಸಿಕೊಡುವಂತೆ ವಿನಂತಿ.
ಟಿ ಸಾತಗಳ್ಳಿ ಲೇಔಟ್ ನಿವಾಸಿಗಳು.




Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com