ಮೈಸೂರು: ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಜ.24ರ ಸಂಜೆ 5ಕ್ಕೆ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ತ್ರಿವಿಧ ದಾಸೋಹಿಗಳು, ಶೈಕ್ಷಣಿಕ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ. ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ರಾಮಕೃಷ್ಣಾಶ್ರಮದ ಶ್ರೀ ಮುಕ್ತಿದಾನಂದಜಿ, ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಕನಕಗಿರಿಯ ಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಕನಕಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಅಲೀ ಜನೂಬ್ ಮೌಲಾನಾ ಉಸ್ಮಾನ್ ಷರೀಫ್, ಫಾದರ್ ನರೋನ್ಹಾ ಇತರರು ಭಾಗವಹಿಸಲಿದ್ದಾರೆ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕಿ ಪಿ. ಶಾರದಮ್ಮ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶ್ರೀನಿವಾಸಗೌಡ ನೇಮಕ
ಕೆ.ಆರ್. ನಗರ: ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಶ್ರೀನಿವಾಸಗೌಡ ನೇಮಕಗೊಂಡಿದ್ದಾರೆ. ಇವರು ಈ ಹಿಂದೆ ಎರಡು ಬಾರಿ ತಾಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರಲ್ಲದೆ, ಪ್ರಸ್ತುತ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ನ್ಯಾಕ್‌ನಿಂದ ಬಿ ದರ್ಜೆ ಮಾನ್ಯತೆ
ಕೆ.ಆರ್. ನಗರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ಪ್ರಗತಿ ಆಧರಿಸಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ನ್ಯಾಕ್ ಮಂಡಳಿ ಬಿ ಗ್ರೇಡ್ ಮಾನ್ಯತೆ ನೀಡಿದೆ. ಈ ಮಾನ್ಯತೆಯಿಂದ ಮುಂದಿನ ಐದು ವರ್ಷಗಳವರೆಗೆ ಆಯೋಗದಿಂದ ಗ್ರಂಥಾಲಯ, ಸಂಶೋಧನೆ, ಕಟ್ಟಡ ನಿರ್ಮಾಣ ಮತ್ತು ಕ್ರೀಡಾ ಸಂಬಂಧಿತ ಕಾರ್ಯ ಚಟುವಟಿಕೆಗಳಿಗೆ ಅಗತ್ಯ ಆರ್ಥಿಕ ಅನುದಾನ ಲಭ್ಯವಾಗಲಿದೆ. ಇದರಿಂದ ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿಯ ಜತೆಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಲತ್ತು ಮತ್ತು ಅಗತ್ಯ ಕಟ್ಟಡ ಮತ್ತಿತರ ಪ್ರಯೋಜನಗಳು ದೊರಕಲಿವೆ. ಬಿ ಗ್ರೇಡ್ ಮಾನ್ಯತೆ ಪಡೆಯಲು ಶ್ರಮಿಸಿರುವ ಕಾಲೇಜಿನ ಬೋಧನಾ ಸಿಬ್ಬಂದಿ ವರ್ಗದವರನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.