ಮೈಸೂರು: ಆಯತಪ್ಪಿ ಬಿದ್ದು ಬೈಕ್ ಸವಾರನೊಬ್ಬ ಮೃತಪಟ್ಟಿರುವ ಘಟನೆ ಹಿನಕಲ್ ವರ್ತುಲ ರಸ್ತೆಯಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ. ತಮಿಳುನಾಡಿನ ಮಧುರೈ ಮೂಲದ ಅಳಗಪ್ಪ ಎಂಬವರ ಪುತ್ರ ಚಂದಿರನ್ ಅ. ಚಂದ್ರ (28) ಮೃತಪಟ್ಟವರು. ಇವರು ಬೋಗಾದಿ ವರ್ತುಲ ರಸ್ತೆಯಲ್ಲಿರುವ ಲೋಬೋಸ್ ಕೋರ್ಟ್ಯಾರ್ಡ್ ರೆಸ್ಟೋರೆಂಟ್ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, ರಾತ್ರಿ ಕೆಲಸ ಮುಗಿಸಿ ಬೈಕಿನಲ್ಲಿ ವಿಜಯನಗರದಲ್ಲಿರುವ ಮನೆಗೆ ಹೋಗುತ್ತಿದ್ದಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಈ ಸಂಬಂಧ ವಿವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಾಯ: ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿರುವ ಘಟನೆ ಹಿನಕಲ್ ವರ್ತುಲ ರಸ್ತೆ ಜಂಕ್ಷನ್ನಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ. ಚಾಲಕ ಪವನ್, ಕ್ಲೀನರ್ ಮಧು ಗಾಯಗೊಂಡವರು. ಶುಂಠಿ ತುಂಬಿದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಜೋಳ ತುಂಬಿದ ಲಾರಿ ಪಲ್ಟಿ ಹೊಡೆದಿದ್ದು, ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ವಿವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.